ಸ್ವೀಪ್ ಸಮಿತಿಯಿಂದ ಚುರುಕು ಕಾರ್ಯ

ಬ್ಯಾಡಗಿ,ಏ15 : ಚುನಾವಣಾ ಪ್ರಚಾರದ ಅಬ್ಬರಕ್ಕಿಂತಲೂ ಹೆಚ್ಚಾಗಿ ಚುನಾವಣಾ ಆಯೋಗ ಮತ ಜಾಗೃತಿಗೆ ಸೃಷ್ಟಿಸಿರುವ ಸ್ವೀಪ್ ಸಮಿತಿಯ ಕಾರ್ಯ ಚಟುವಟಿಕೆಗಳೇ ಹೆಚ್ಚು ಸದ್ದು ಮಾಡುತ್ತಿವೆ.
ಕ್ಷೇತ್ರದ ಬಹುತೇಕ ಜನಸಂದಣಿ ಪ್ರದೇಶಗಳನ್ನು ರಾಜಕೀಯ ಪಕ್ಷಗಳು ಇನ್ನೂ ತಲುಪಲಾಗಿಲ್ಲ. ಆದರೆ ಮತದಾನ ಜಾಗೃತಿಗೆಂದು ಜಿಲ್ಲಾಡಳಿತ ನಿಯೋಜಿಸಿರುವ ಸ್ವೀಪ್ ಸಮಿತಿಗಳು ಹಳ್ಳಿಹಳ್ಳಿಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಕೆಲಸಮಾಡುತ್ತಿವೆ. ವಿಧಾನಸಭೆ ಹಾಗೂ ಇತರೆ ಚುನಾವಣೆಯಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ವ್ಯವಸ್ಥಿತ ಮತದಾರರ ನೋಂದಣಿ ಶಿಕ್ಷಣ ಮತ್ತು ಮತದಾನದಲ್ಲಿ ಭಾಗವಹಿಸುವಿಕೆ (‘ಸ್ವೀಪ್’) ಸಿಸ್ಟಮಾಟಿಕ್ ವೋಟರ್ಸ್ ಎಜುಕೇಷನ್ ಅಂಡ್ ಎಲೆಕ್ಟ್ರೋಲ್ ಪಾರ್ಟಿಸಿಪೇಷನ್ ಎಂಬ ಕಾರ್ಯಕ್ರಮವನ್ನು 2011ರಲ್ಲಿ ಜಾರಿಗೆ ತಂದು ಒಂದು ವಿಧಾನಸಭೆ ಚುನಾವಣೆಯಿಂದ ಮತ್ತೊಂದು ವಿಧಾನಸಭಾ ಚುನಾವಣೆಗೆ ಮತದಾನದ ಪ್ರಮಾಣವನ್ನು ಹೆಚ್ಚಿಸುವ, ಮತದಾರರ ಕರ್ತವ್ಯಗಳು, ವಿದ್ಯುನ್ಮಾನ ಮತಯಂತ್ರ, ಮತ ಖಾತರಿ ಯಂತ್ರ ಬಳಕೆ, ಹಣ, ಇತರೆ ಆಮಿಷಗಳಿಗೊಳಗಾಗದೇ ಮತ ಚಲಾಯಿಸುವ ಬಗ್ಗೆಯೂ ಕೂಡ ಸ್ವೀಪ್ ಬೆಳಕು ಚೆಲ್ಲುವ ಮೂಲ ಗುರಿಯನ್ನು ಹೊಂದಿದೆ.
ಶೇಕಡಾ 90ಕ್ಕೇರಿಸುವ ಧ್ಯೇಯ:
ವಿಧಾನಸಭಾ ಚುನಾವಣೆಗಳಲ್ಲಿ ಸ್ವೀಫ್ ಕಾರ್ಯಕ್ರಮ ಆಯೋಜಿಸಿ ಮತದಾನದ ಪ್ರಮಾಣವನ್ನು ಶೇ.90ಕ್ಕೆ ಏರಿಕೆ ಮಾಡಬೇಕು ಎಂಬ ಮುಖ್ಯ ಗುರಿಯನ್ನು ಭಾರತೀಯ ಚುನಾವಣಾ ಆಯೋಗ ಹೊಂದಿದೆ. ಸಾರ್ವಜನಿಕ ಪ್ರದೇಶಗಳ ಸರಕಾರಿ ಕಚೇರಿ ಗೋಡೆಗಳ ಮೇಲೆ ಮತದಾನ ಮಾಡುವುದು ಹೇಗೆ ಎಂಬ ಪ್ರಮುಖ ನಾಲ್ಕು ವಿಚಾಗಳನ್ನೊಳಗೊಂಡ ಮತ್ತು ನೋಂದಣಿ, ವಿವಿ ಪ್ಯಾಟ್ ಬಳಕೆ ಸೇರಿದಂತೆ ಚುನಾವಣಾ ಆಯೋಗದ ಉಚಿತ ಸಹಾಯವಾಣಿ 1905 ಅಂಕಿಗಳನ್ನು ಬರೆಯಲು ಯೋಜಿಸಿದ್ದು, ಜಾನಪದ ಪ್ರಕಾರಗಳನ್ನು ಕ್ಷೇತ್ರದಲ್ಲಿ ಸ್ವೀಪ್ ನಡಿಯಲ್ಲಿ ಮತದಾನದ ಅರಿವು ಮೂಡಿಸಲು ಬಳಸಿಕೊಳ್ಳಲಾಗುತ್ತಿದೆ.

ಯುವ ಮತದಾರರಲ್ಲಿ ಜಾಗೃತಿ, ಜಾಥಾ, ಮನೆ ಮನೆಗೆ ಭೇಟಿ ನೀಡಿ, ವಿಚಾರ ಸಂಕಿರಣ, ಸಹಿ ಸಂಗ್ರಹ, ವಿಶೇಷಚೇತನರಿಂದ ತ್ರಿಚಕ್ರವಾಹನದ ಮೂಲಕ ಬೈಕ್ ರ್ಯಾಲಿ, ರೇಡಿಯೋ ಕಾರ್ಯಕ್ರಮ, ಬಸ್ ನಿಲ್ದಾಣದಲ್ಲಿ ಮಾಹಿತಿ ಹೀಗೆ ನಾನಾ ರೀತಿಯ ವೈವಿಧ್ಯಮಯ ಜಾಗೃತಿ ಕಾರ್ಯಕ್ರಮಗಳು ಸ್ವೀಪ್‍ನಡಿಯಲ್ಲಿ ಆಯೋಜನೆಯಾಗುತ್ತಿವೆ. ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ ಇಲಾಖೆಗಳು ಎನ್‍ಜಿಒಗಳು ಮತ್ತು ಯುವಕ, ಯುವತಿ ಮಂಡಳಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸ್ವಸಹಾಯ ಗುಂಪುಗಳು, ಸ್ತ್ರೀಶಕ್ತಿ ಸಂಘಗಳು ಹಾಗೂ ವಿವಿಧ ಸಂಘಟನೆಗಳು ಸ್ವಯಂ ಪ್ರೇರಿತರಾಗಿ ಸ್ವೀಪ್ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.