ಸ್ವೀಪ್ ಜಾಗೃತಿ ಅಭಿಯಾನ:ವಿಧಾನಸೌಧದಲ್ಲಿ ರಂಗೋಲಿ‌ ಕಲರವ, ಮೆಹಂದಿ ಸಿಂಗಾರ

ಕಲಬುರಗಿ,ಏ.30: ಮತದಾನ‌ದ ಮಹತ್ವ ಸಾರುವ ಎಲ್ಲೆಡೆ ಬಣ್ಣ-ಬಣ್ಣದ ರಂಗೋಲಿಗಳ ಚಿತ್ತಾರ, ಮತದಾನ ಪ್ರತಿಜ್ಞೆ ಪ್ರತಿರೂಪದ ಹಸ್ತಾಕ್ಷರ, ಕಲಾ ತಂಡಗಳ ಕಲಾ‌ ಪ್ರದರ್ಶನ, ಮಹಿಳೆಯರಿಗೆ ಮೆಹಿಂದಿ ಸಿಂಗಾರ. ಇದೆಲ್ಲವು ಭಾನುವಾರ ಇಲ್ಲಿನ‌ ಮಿನಿ ವಿಧಾನಸೌಧದ ಅವರಣದಲ್ಲಿ ಕಂಡುಬಂದಿದ್ದು.

ಹೌದು, ಮತದಾನ‌ ಪ್ರಮಾಣ ಹೆಚ್ಚಿಸಲು ಭಾರತ‌ ಚುನಾವಣಾ ಆಯೋಗವು ಏ.29 ಮತ್ತು 30 ರಂದು ಎರಡು ದಿನದ ವಿಶೇಷ ಜಾಗೃತಿ ಅಭಿಯಾನಕ್ಕೆ ಕರೆ‌ ನೀಡಿದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿಯು ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳಿವು.

ವಿಧಾನಸೌದ ಆವರಣದೆಲ್ಲದೆ ಚುನಾವಣಾ ಆಯೋಗದ ಲೋಗೊ, ಮತದಾನ, ಇ.ವಿ.ಎಂ. ಯಂತ್ರ, ಮೇ‌ 10ಕ್ಕೆ‌ ಮತದಾನ ಮಾಡಿ, ಕಡ್ಡಾಯವಾಗಿ ಮತ ಚಲಾಯಿಸಿ ‌ಹೀಗೆ ಎಲ್ಲವು ಬಣ್ಣ – ಬಣ್ಣದ ರಂಗೋಲಿಯಲ್ಲಿ ಮೂಡಿಬಂದವು. ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಅವರು ಎಲ್ಲವನ್ನು ಕುತೂಹಲದಿಂದ ವೀಕ್ಷಿಸಿ, ಸ್ವೀಪ್ ಜಾಗೃತಿಗೆ ಕೈಜೋಡಿಸಿದವರಿಗೆ ಧನ್ಯವಾದ ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಮತದಾನದ ಕುರಿತು ಜನಜಾಗೃತಿ ಮೂಡಿಸಲು ಸಿದ್ಧಗೊಂಡಿರುವ‌ ಬೀದಿ ನಾಟಕ‌ ಜಾಗೃತಿ ಜಾಥಾಗೆ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಚಾಲನೆ ನೀಡಿದರು.

ಮೆಹಂದಿ ರಂಗು:ಸ್ವೀಪ್ ಜಾಗೃತಿ ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರಿಗೆ ಶಾಲಾ -ಕಾಲೇಜು ವಿದ್ಯಾರ್ಥಿನಿಯರು ವಿವಿಧ ವಿನ್ಯಾಸದ ಮೆಹಂದಿ ಬಿಡಿಸಿದರು. ಮೆಹಂದಿ ಹಾಕಿಸಿಕೊಂಡವರು ಹಾಗೆ ನಗೆ ಚೆಲ್ಲಿದರು.
ಸಹಿ ಅಭಿಯಾನ:ಮತದಾನ ಮಾಡುವ ಕುರಿತು ಸಹಿ ಅಭಿಯಾನ ಸಹ ಆಯೋಜಿಸಿತ್ತು. ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಅವರು ಆರಂಭದಲ್ಲಿ ತಮ್ಮ‌ ಹಸ್ತಾಕ್ಷರ ಹಾಕುವ ಮೂಲಕ ಇದಕ್ಕೆ ಚಾಲನೆ ನೀಡಿದರು. ಅವರೊಂದಿಗಿದ್ದ ಇತರೆ ಅಧಿಕಾರಿಗಳು ಇದನ್ನೆ ಪಾಲಿಸಿದರು.
ಚಂಪಾ‌ ಕ್ರೀಡಾಂಗಣದಲ್ಲಿ ಡಿ.ಸಿ.ಯಿಂದ ಪ್ರತಿಜ್ಞೆ ‌ವಿಧಿ‌ ಬೋಧನೆ:ಶಾಲಾ-ಕಾಲೇಜು, ಎನ್.ಸಿ.ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಮತದಾನ ಕುರಿತು ಜಾಗೃತಿ ಜಾಥಾವು ಜಿಲ್ಲಾಧಿಕಾರಿಗಳ ಕಚೇರಿಯಿಂದ ಚಂದ್ರಶೇಖರ‌ ಪಾಟೀಲ ಕ್ರೀಡಾಂಗಣ ವರೆಗೆ ಕಲಾ ತಂಡಗಳೊಂದಿಗೆ ನಡೆಯಿತು. ಚಂಪಾ ಕ್ರೀಡಾಂಗಣದಲ್ಲಿ ಎನ್.ಸಿ.ಸಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು
ಡ್ರೋನ್‌ ಕ್ಯಾಮೆರಾನಲ್ಲಿ ಕಾಣುವ ಹಾಗೆ
10th May Vote, 10th May Sveep ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು.

ಈ ಸಂದರ್ಭದಲ್ಲಿ ಡಿ.ಎಚ್.ಓ. ಡಾ.ರಾಜಶೇಖರ ಮಾಲಿಪಾಟಿಲ, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಆಯುಷ್ ಉಪನಿರ್ದೇಶಕಿ ಡಾ.ಗಿರೀಜಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗ್ರಾಮೀಣ ಕೈಗಾರಿಕೆ) ಉಪನಿರ್ದೇಶಕ ಅಬ್ದುಲ್ ಅಜೀಮ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ ಸೇರಿದಂತೆ ವಿವಿಧ ಇಲಾಖೆಯ ಇನ್ನಿತರ ಅಧಿಕಾರಿಗಳು, ಸಿಬ್ಬಮದಿಗಳು, ವಿಶೇಷಚೇತನರು, ಶಾಲಾ-ಕಾಲೇಜು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.