ಸ್ವೀಡನ್ ರಾಯಭಾರೀ ಕಚೇರಿಗೆ ಬೆಂಕಿ

ಬಗ್ದಾದ್ (ಇರಾಕ್), ಜು.೨೧- ಸ್ವೀಡನ್‌ನಲ್ಲಿ ಕುರಾನ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲು ಅವಕಾಶ ನೀಡಿರುವುದನ್ನು ಖಂಡಿಸಿ ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ವೀಡನ್‌ನ ದೂತಾವಾಸಕ್ಕೆ ಬೆಂಕಿ ಹಚ್ಚಿರುವ ಆಘಾತಕಾರಿ ಖಟನೆ ನಡೆದಿದೆ. ಅದೂ ಅಲ್ಲದೆ ಇರಾಕ್ ಸರ್ಕಾರ ಸ್ವೀಡನ್ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕೂಡ ಅಂತ್ಯಗೊಳಿಸಿದೆ.
ಪ್ರತಿಭಟನಾಕಾರರು ಹಲವಾರು ಗಂಟೆಗಳ ಕಾಲ ರಾಜತಾಂತ್ರಿಕ ಆವರಣದಲ್ಲಿ ಇದ್ದುಕೊಂಡು ಇರಾಕಿನ ಶಿಯಾ ಧರ್ಮಗುರು ಮತ್ತು ರಾಜಕೀಯ ನಾಯಕ ಮುಕ್ತಾದ ಅಲ್-ಸದರ್ ಅವರನ್ನು ತೋರಿಸುವ ಧ್ವಜಗಳು ಮತ್ತು ಚಿಹ್ನೆಗಳನ್ನು ಬೀಸಿದರು. ಅಲ್ಲದೆ ಅಲ್ಪಪ್ರಮಾಣದಲ್ಲಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಅದೃಷ್ಟವಶಾತ್ ರಾಯಭಾರಿ ಕಚೇರಿಯ ಸಿಬ್ಬಂದಿಯನ್ನು ಒಂದು ದಿನದ ಹಿಂದೆಯೇ ಸ್ಥಳಾಂತರಿಸಲಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಅವಘಡ ಸಂಭವಿಸಿಲ್ಲ. ಸ್ವೀಡನ್‌ನಲ್ಲಿ ನೆಲೆಸಿರುವ ಇರಾಕ್ ನಿರಾಶ್ರಿತ ಸಲ್ವಾನ್ ಮೊಮಿಕ ಎಂಬಾತನಿಗೆ ಸ್ವೀಡನ್ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿರುವ ಇರಾಕ್ ರಾಯಭಾರ ಕಚೇರಿಯೆದುರು ತನ್ನ ಬೆಂಬಲಿಗರ ಜತೆಸೇರಿ ಕುರಾನ್ ಹಾಗೂ ಇರಾಕ್ ಧ್ವಜಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲು ಸ್ವೀಡನ್ ಸರಕಾರ ಅನುಮತಿ ನೀಡಿತ್ತು. ಇರಾಕ್ ಸರಕಾರದ ವಿರುದ್ಧ ಅಸಮಾಧಾನಗೊಂಡಿರುವ ಮೊಮಿಕ ಜೂನ್ ೨೮ರಂದು ಬೆಂಬಲಿಗರ ಜತೆಸೇರಿ ಸ್ಟಾಕ್‌ಹೋಮ್‌ನಲ್ಲಿ ಕುರಾನ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು. ಸದ್ಯ ಈ ಘಟನೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ಸ್ವೀಡನ್ ಸರ್ಕಾರದ ವಿರುದ್ಧ ಈಗಾಗಲೇ ಜಗತ್ತಿನ ಹಲವೆಡೆ ಪ್ರತಿಭಟನೆ ನಡೆದಿತ್ತು. ಇನ್ನು ಗುರುವಾರ ಬಗ್ದಾದ್‌ನಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದಾಗ ಪೊಲೀಸರು ಜಲಫಿರಂಗಿ ಹಾಗೂ ಲಾಠಿಚಾರ್ಜ್ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದರು. ಕುರಾನ್‌ಗೆ ಬೆಂಕಿ ಹಚ್ಚುವುದನ್ನು ಖಂಡಿಸಿದ ಪ್ರತಿಭಟನಾಕಾರರು, ಇರಾಕ್ ಮತ್ತು ಸ್ವೀಡನ್ ಸರಕಾರ ಇಂತಹ ಕೃತ್ಯ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಬಗ್ದಾದ್‌ನಲ್ಲಿನ ದೂತಾವಾಸದ ಸಿಬಂದಿ ಸುರಕ್ಷಿತವಾಗಿದ್ದಾರೆ ಎಂದು ಸ್ವೀಡನ್‌ನ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ದೂತಾವಾಸಕ್ಕೆ ಬೆಂಕಿ ಹಚ್ಚಿರುವ ಪ್ರಕರಣವನ್ನು ಖಂಡಿಸಿರುವ ಇರಾಕ್‌ನ ವಿದೇಶಾಂಗ ಸಚಿವಾಲಯ, ತಪ್ಪಿತಸ್ತರನ್ನು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.