ಸ್ವೀಕರ್ ಪೀಠಕ್ಕೆ ಅಗೌರವ 10ಮಂದಿ ಬಿಜೆಪಿ ಶಾಸಕರು ಸಸ್ಪೆಂಡ್ ಯತ್ನಾಳ್ ಅಸ್ವಸ್ಥ

ಬೆಂಗಳೂರು,ಜು.19-ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿಸಿದ ಹಿನ್ನೆಲೆಯಲ್ಲಿ ವಿಧಾನಸಭೆ ಅಧಿವೇಶನದಿಂದ 10 ಮಂದಿ ಬಿಜೆಪಿ ಶಾಸಕರನ್ನು ಸ್ಪೀಕರ್ ಯು.ಟಿ.ಖಾದರ್ ಅಮಾನತು ಮಾಡಿ ಆದೇಶಿಸಿದ್ದಾರೆ.
ಇನ್ನು ಈ ವೇಳೆ ಪ್ರತಿಭಟನಾ ನಿರತ ಬಿಜೆಪಿ ಸದಸ್ಯರನ್ನು ಮಾರ್ಷಲ್​ಗಳು ಹೊತ್ತೊಯ್ದಿದ್ದಾರೆ. ಮತ್ತೊಂದು ಕಡೆ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅಸ್ವಸ್ಥಗೊಂಡು ಕುಸಿದು ಬಿದ್ದ ಪ್ರಕರಣವೂ ನಡೆಯಿತು. ಅಸ್ವಸ್ಥಗೊಂಡ ಅವರನ್ನು ತಕ್ಷಣ ಸ್ಟ್ರೆಚರ್​ನಲ್ಲಿ ಮಾರ್ಷಲ್​ಗಳು ಹೊತ್ತು ಕೊಂಡು ಹೋಗಿ, ಆಸ್ಪತ್ರೆಗೆ ರವಾನಿಸಿದರು.
ಅಮಾನತು ಆದೇಶವನ್ನು ಖಂಡೀಸಿ ಪ್ರತಿಪಕ್ಷ ಸದಸ್ಯರು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದರು. ಸ್ಪೀಕರ್ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಮಾರ್ಷಲ್​ಗಳು ಮಧ್ಯಪ್ರವೇಶಿಸಿದರು. ಈ ವೇಳೆ, ವಿಧಾನಸಭೆ ಪ್ರವೇಶ ದ್ವಾರದ ಬಳಿ ಮಾರ್ಷಲ್ ಹಾಗೂ ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ನೂಕು ನುಗ್ಗಲು ವೇಳೆ ವಿಧಾನಸಭೆ ಪ್ರವೇಶ ದ್ವಾರದ ಗ್ಲಾಸ್ ಬಾಗಿಲು ಪುಡಿ ಪುಡಿಯಾಯಿತು.
ಕಲಾಪ ರಣಾಂಗಣ:
ಇದಕ್ಕೂ ಮುನ್ನ, ಭೋಜನ‌ ವಿರಾಮದ ಬಳಿಕ ವಿಧಾನಸಭೆ ಕಲಾಪ ರಣಾಂಗಣವಾಗಿ ಮಾರ್ಪಟ್ಟಿತು. ಶಾಸಕರಾದ ಅಶ್ವತ್ಥನಾರಾಯಣ್, ಅರವಿಂದ ಬೆಲ್ಲದ್, ವೇದ ವ್ಯಾಸ್ ಕಾಮತ್, ಆರಗ ಜ್ಞಾನೇಂದ್ರ, ಧೀರಜ್ ಮುನಿರಾಜು, ಆರ್.ಅಶೋಕ್​ ಸೇರಿ 10 ಮಂದಿಯನ್ನು ಮಾರ್ಷಲ್​ಗಳು ಹರಸಾಹಸ ಪಟ್ಟು ಸದನದಿಂದ ಹೊತ್ತೊಯ್ದು, ಹೊರಗೆ ಕಳುಹಿಸಿದರು.
ಕುಸಿದು ಬಿದ್ದ ಯತ್ನಾಳ:
ಇದಾದ ಬಳಿಕ ಅಮಾನತಾದ ಬಿಜೆಪಿ ಶಾಸಕರು ಇತರ ಬಿಜೆಪಿ ಶಾಸಕರು ಜೊತೆಗೂಡಿ ವಿಧಾನಸಭೆ ಮೊಗಸಾಲೆಯಲ್ಲಿನ ಸ್ಪೀಕರ್ ಕಚೇರಿ ಮುಂದೆ ಕೂತು ಪ್ರತಿಭಟನೆ ನಡೆಸಿದರು. ಈ ವೇಳೆ, ಸ್ಪೀಕರ್ ಹಾಗೂ ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿದರು. ಬಳಿಕ ಮಾರ್ಷಲ್​ಗಳು ಅಲ್ಲಿಂದ ಪ್ರತಿಭಟನಾ ನಿರತ ಬಿಜೆಪಿ ಸದಸ್ಯರನ್ನು ಹೊತ್ತೊಯ್ದರು. ಈ ವೇಳೆ, ವಿಧಾನಸಭೆ ಪ್ರವೇಶ ದ್ವಾರದ ಬಳಿ ನೂಕು ನುಗ್ಗಲು ಉಂಟಾಯಿತು. ಗದ್ದಲದ ಮಧ್ಯೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥರಾದರು. ಬಳಿಕ ಅವರನ್ನು ಸ್ಟ್ರೆಚರ್ ಮೂಲಕ ಆಂಬ್ಯುಲೆನ್ಸ್​ಗೆ ರವಾನಿಸಿ, ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಕಾಂಗ್ರೆಸ್ ವಿರುದ್ಧ ಘೋಷಣೆ: ವಿಧಾನಸೌಧದ ಕೆಂಗಲ್​ ಗೇಟ್​ನ ದ್ವಾರದಲ್ಲಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದರು. ಹಿರಿಯ ಶಾಸಕರಾದ ಸುರೇಶ್ ಕುಮಾರ್, ವಿ. ಸುನೀಲ್ ಕುಮಾರ್, ಮುನಿರತ್ನ, ಆರ್. ಅಶೋಕ್, ಅರವಿಂದ್ ಬೆಲ್ಲದ್, ಮಹೇಶ್ ಟೆಂಕಿನಕಾಯಿ, ಧೀರಜ್ ಮುನಿರಾಜು, ಚನ್ನಬಸಪ್ಪ, ಜ್ಯೋತಿ ಗಣೇಶ್, ಸಿ. ಕೆ ರಾಮಮೂರ್ತಿ ಮತ್ತಿತರ ಶಾಸಕರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ದೋಖಾ, ದೋಖಾ ಕಾಂಗ್ರೆಸ್ ದೋಖಾ, ಮೋಸ, ಮೋಸ ಕಾಂಗ್ರೆಸ್ ಮೋಸ ಎಂದು ಘೋಷಣೆ ಕೂಗಿದರು.
ಪ್ರತಿಭಟನೆಗೆ ಜೆಡಿಎಸ್‌ ಸಾತ್​:
ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್. ಡಿ ರೇವಣ್ಣ ಸೇರಿದಂತೆ ಜೆಡಿಎಸ್‌ ಶಾಸಕರು, ಬಿಜೆಪಿ ಶಾಸಕರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.