
ಬೀದರ್: ಜು.31:ಯುವಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಂಕಲ್ಪ ತೊಡಬೇಕು ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ಸ್ವಾವಲಂಬಿ ಭಾರತ ಅಭಿಯಾನದ ಭಾಗವಾಗಿ ಇಲ್ಲಿಯ ವಿದ್ಯಾನಗರ ಕಾಲೊನಿಯಲ್ಲಿ ಅಟಲ್ ಉದ್ಯೋಗ ಮಾರ್ಗದರ್ಶಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ನೆರವು ಪಡೆದು ಯುವಕರು ಉದ್ಯೋಗದಾತರಗಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.
ಅಟಲ್ ಉದ್ಯೋಗ ಮಾರ್ಗದರ್ಶಿ ಕೇಂದ್ರವು ಸ್ವ ಉದ್ಯೋಗ ಕೈಗೊಳ್ಳಲು ಬಯಸುವ ನಿರುದ್ಯೋಗಿ ಯುವಕರು ಹಾಗೂ ಉದ್ಯೋಗ ಆಕಾಂಕ್ಷಿಗಳಿಗೆ ಆಶಾಕಿರಣವಾಗಲಿದೆ ಎಂದು ತಿಳಿಸಿದರು.
ಕೇಂದ್ರವು 500 ರಿಂದ 1,000 ಯುವಕರಿಗೆ ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡಲಿದೆ. ಉದ್ಯಮ ಆರಂಭಕ್ಕೆ ಅಗತ್ಯ ಸಹಕಾರ ಕೊಡಲಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವಾವಲಂಬಿ ಭಾರತ ಅಭಿಯಾನದ ಕರ್ನಾಟಕ ಉತ್ತರ ಪ್ರಾಂತದ ಸಹ ಸಮನ್ವಯ ಪ್ರಮುಖ ಚೆನ್ನಬಸವ ರೆಡ್ಡಿ ಹೇಳಿದರು.
ಕೇಂದ್ರವು ಬರುವ ದಿನಗಳಲ್ಲಿ ಯುವಕರಿಗೆ ಎಲ್ಲ ಬಗೆಯ ಉದ್ಯೋಗಗಳ ಮಾಹಿತಿ ಒದಗಿಸಲಿದೆ. ಇದಕ್ಕಾಗಿಯೇ ಪರಿಣಿತರ ತಂಡವನ್ನು ರಚಿಸಲಿದೆ ಎಂದು ಸ್ವಾವಲಂಬಿ ಭಾರತ ಅಭಿಯಾನದ ಬೀದರ್ ಘಟಕದ ಪ್ರಮುಖ ಸಚ್ಚಿದಾನಂದ ಚಿದ್ರೆ ಹೇಳಿದರು.
ಉದ್ಯೋಗ ಆಕಾಂಕ್ಷಿಗಳು ಕೇಂದ್ರದ ಪ್ರಯೋಜನ ಪಡೆಯಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಸಲಹೆ ಮಾಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿವರಾಜ ಹಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೌಫೊದ್ದಿನ್ ಕಚೇರಿವಾಲೆ, ಬಿಡಿಎ ಅಧ್ಯಕ್ಷ ಬಾಬುವಾಲಿ, ಅಭಿಯಾನದ ಸಹ ಪ್ರಮುಖ ರಶ್ಮಿ ಪಾಟೀಲ, ಸಮನ್ವಯ ಸಮಿತಿ ಸದಸ್ಯರಾದ ಗಜಾನನ ಪೋಕಲ್ವಾರ್, ರುಚಿಕಾ ಶಾಹ ಮೆಹ್ತಾ, ಶಿವಪ್ರಕಾಶ ಗೌಡರ್, ಸೌರಭ, ರಾಜಕುಮಾರ ಅಳ್ಳೆ, ಡಾ. ಲೋಕೇಶ ಹಿರೇಮಠ, ಸುಹಾಸ್ ಮೆಹ್ತಾ, ಗೋಪಾಲ್, ಡಾ. ವಿಜಯ ಕೊಂಡ, ಪ್ರಶಾಂತ, ಶಾಂತಕುಮಾರ ಬಿರಾದಾರ, ವಿಜಯ ಸೂರ್ಯವಂಶಿ, ಭಗವಂತಪ್ಪ ಇದ್ದರು.
ಡಾ.ಸುಜಾತಾ ಹೊಸಮನಿ ಸ್ವಾಗತಿಸಿದರು. ಸತ್ಯಪ್ರಕಾಶ ನಿರೂಪಿಸಿದರು. ಶ್ರೀಕಾಂತ ಮೋದಿ ವಂದಿಸಿದರು.