ಸ್ವಾವಲಂಬಿ ಬದುಕಿಗೆ ದಾರಿ ತೋರಿಸಿದ ಗೋವಿಂದಗೌಡ

ಕೋಲಾರ, ಜು.೨೬ : ಮಧುವೇಹದಿಂದಾಗಿ ಎಡಗಾಲನ್ನು ಕಳೆದುಕೊಂಡು ಜೀವನ ನಡೆಸಲಾಗದೇ ಪರಿತಪಿಸುತ್ತಿದ್ದ ನಗರದ ಕೋಟೆ ಬಡಾವಣೆಯ ನಿವಾಸಿ ವಿಕಲಚೇತನ ಪ್ರಸಾದ್ ಅವರಿಗೆ ಬದುಕು ಸಾಗಿಸಲು ಅನುವಾಗುವಂತೆ ೧.೨೦ ಲಕ್ಷ ಮೌಲ್ಯದ ಆಟೋ ಖರೀದಿಸಿ ಒದಗಿಸುವ ಮೂಲಕ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೃದಯವಂತಿಕೆ ಮೆರೆದಿದ್ದಾರೆ.
ಈ ಹಿಂದೆ ಬಾಡಿಗೆ ಆಟೋ ಓಡಿಸುವ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದ ಪ್ರಸಾದ್ ಅವರಿಗೆ ಡಯಾಬಿಟೀಸ್ ಹೆಮ್ಮಾರಿಯಂತೆ ವಕ್ಕರಿಸಿದ್ದು, ಗ್ಯಾಂಗ್ರಿನ್‌ನಿಂದಾಗಿ ಎಡಗಾಲು ಕಳೆದುಕೊಳ್ಳುವಂತಾಗಿ ಜೀವನ ನಿರ್ವಹಣೆ ಸಾಧ್ಯವಾಗದೇ ಅತ್ಯಂತ ನೋವಿನಿಂದ ಕಾಲ ನೂಕುತ್ತಿದ್ದರು.
ಪ್ರಸಾದ್ ತನ್ನ ಜೀವ ಉಳಿಸಿಕೊಳ್ಳಲು ಎಡಗಾಲು ಕಳೆದುಕೊಳ್ಳುತ್ತಿದ್ದಂತೆ ಆತನ ಜೀವನ ನಿರ್ವಹಣೆಗೆ ಬಾಡಿಗೆ ಆಟೋ ಸಹಾ ಸಿಗದಾಯಿತು. ಇದರಿಂದಾಗಿ ಮನೆ ನಡೆಸಲು ಕಷ್ಟವಾಗಿದ್ದು, ಪತ್ನಿ,ಪುತ್ರನನ್ನು ಸಾಕಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು.
ಕಾಲು ಕಳೆದುಕೊಂಡು ಕಣ್ಣೀರಿಡುತ್ತಿದ್ದ ಪ್ರಸಾದ್ ಜೀವನದ ಕುರಿತು ಈ ಭಾಗದ ಕೆಲವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಗಮನಕ್ಕೆ ತಂದಿದ್ದು, ನೆರವಿಗೆ ಮನವಿ ಮಾಡಿದ್ದರು.ಕೂಡಲೇ ಪ್ರಸಾದ್‌ರನ್ನು ಬ್ಯಾಂಕಿನ ಬಳಿಗೆ ಕರೆಯಿಸಿಕೊಂಡು ಆತನ ಕಷ್ಟ ಆಲಿಸಿದ ಗೋವಿಂದಗೌಡರು ಕೂಡಲೇ ಬದುಕು ನಿರ್ವಹಣೆಗೆ ಕಾಲಿಲ್ಲದಿದ್ದರೂ ಆಟೋ ಓಡಿಸಲು ಸಾಧ್ಯವೇ ಎಂಬುದನ್ನು ಕೇಳಿ ತಿಳಿದುಕೊಂಡು ಆತನ ಬದುಕಿಗೆ ಆಸರೆಯಾಗಲು ಉತ್ತಮ ಆಟೋ ಒಂದನ್ನು ಖರೀದಿಸಲು ಹುಡುಕುವಂತೆ ಸ್ನೇಹಿತರಿಗೆ ಸೂಚಿಸಿದರು.
ಅವರ ಪ್ರಯತ್ನದಂತೆ ಇಂದು ೧.೨೦ ಲಕ್ಷ ರೂ ಮೌಲ್ಯದ ಆಟೋ ಖರೀದಿಗೆ ಸಿಕ್ಕಿದ್ದು, ಕೂಡಲೇ ಬ್ಯಾಲಹಳ್ಳಿ ಗೋವಿಂದಗೌಡರು ಪೂರ್ಣ ಹಣ ಪಾವತಿಸಿ ಆಟೋವನ್ನು ವಿಕಲಚೇತನರಾದ ಪ್ರಸಾದ್ ಅವರ ವಶಕ್ಕೆ ಒಪ್ಪಿಸುತ್ತಿದ್ದಂತೆ ನೋವಿನಿಂದ ನಲುಗಿ ಹೋಗಿದ್ದ ಪ್ರಸಾದ್ ಕಣ್ಣಂಚಿನಲ್ಲಿ ಕೃತಜ್ಞತಾಭಾವ ಹಾಗೂ ಆನಂದ ಭಾಷ್ಪ ಕಾಣಿಸಿತು.
ಸಂಬಂಧಿಕರು,ಬಂಧುಗಳು ಕಷ್ಟಕ್ಕೆ ಸಿಲುಕಿದಾಗ ತಮ್ಮ ನೋವನ್ನು ಆಲಿಸುವ ಪರಿಸ್ಥಿತಿಯಲ್ಲಿ ಇಲ್ಲದಿದ್ದರೂ, ಗೋವಿಂದಗೌಡರು ಮಾಡುತ್ತಿರುವ ನೆರವು, ಅವರಿಂದಾಗಿ ನನ್ನ ಕುಟುಂಬಕ್ಕೆ ನಾನೇ ದುಡಿದು ಊಟ ಹಾಕುವ ಮೂಲಕ ಸ್ವಾವಲಂಬಿ ಬದುಕು ನಿರ್ವಹಿಸಲು ನೆರವಾಗುತ್ತಿದೆ ಎಂದು ಪ್ರಸಾದ್ ಹರ್ಷ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿನ ಪರಿಸರ ಮಾಲಿನ್ಯವೋ, ನೀರಿನ ಸಮಸ್ಯೆಯೋ ಗೊತ್ತಿಲ್ಲ ಅತಿ ಹೆಚ್ಚು ಕಿಡ್ನಿ ಸಂಬಂಧಿತ ಪ್ರಕರಣಗಳು ಪತ್ತೆಯಾಗುತ್ತಿದ್ದು, ಅನೇಕರು ಚಿಕಿತ್ಸೆಗೂ ಪರದಾಡುತ್ತಿದ್ದಾರೆ, ಅಂತಹವರ ಪಾಲಿಗೆ ಗೋವಿಂದಗೌಡರು ಸದಾ ನೆರವು ನೀಡುವ ಕಲ್ಪವೃಕ್ಷದಂತಾಗಿದ್ದಾರೆ ಎಂದು ತಿಳಿಸಿದರು.