ಸ್ವಾವಲಂಬಿ ಜೀವನಕ್ಕೆ ಶಿಕ್ಷಣ ಪೂರಕ : ಸಿಪಿಐ ಠಾಕೂರ್

ಔರಾದ್ : ನ.13:ಸ್ವಾವಲಂಬಿ ಜೀವನ ನಡೆಸಲು ಶಿಕ್ಷಣ ಪೂರಕವಾಗಿದ್ದು ವಿದ್ಯಾರ್ಥಿಗಳು ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಿಪಿಐ ರಘುವೀರಸಿಂಗ್ ಠಾಕೂರ್ ಹೇಳಿದರು.

ಪಟ್ಟಣದ ಪತ್ರಿಸ್ವಾಮಿ ಪಿಯು ಕಾಲೇಜಿನಲ್ಲಿ ನಡೆದ ಸ್ವಾವಲಂಬಿ ಭಾರತ ಅಭಿಯಾನ ಕರ್ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭವಿಷ್ಯ ನಿರ್ಮಾಣ ಮಾಡುವ ಶಿಕ್ಷಣ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತದೆ. ಅಲ್ಲದೇ ಪಾಲಕರು ಕೂಡ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿಶೇಷ ಆಸಕ್ತಿ ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಸರಕಾರಿ ಇಲ್ಲವೇ ಖಾಸಗಿ ಉದ್ಯೋಗಗಳಿಗೆ ಜೋತು ಬೀಳುವುದಕ್ಕಿಂತ ಸ್ವಂತ ಉದ್ಯೋಗ ಕೈಗೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಶಾಲಾಹಂತದಲ್ಲಿ ಮಕ್ಕಳು ಶಿಕ್ಷಕರಿಂದ ವೃತ್ತಿ ಶಿಕ್ಷಣ ಕಲೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಸೂಕ್ತ ಎಂದರು.

ಸ್ವಾವಲಂಬಿ ಭಾರತ ಅಭಿಯಾನದ ಕಲ್ಯಾಣ ಕರ್ನಾಟಕದ ಪ್ರಮುಖ ರೇವಣಸಿದ್ಧ ಜಾಡರ್ ಮಾತನಾಡಿ, ಈ ಅಭಿಯಾನ ಎಲ್ಲ ಕಡೆಗಳಲ್ಲೂ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಕಾರ್ಯಾಗಾರ ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ದೇಶದಲ್ಲಿ ಪ್ರತಿ ವರ್ಷ 1 ಕೋಟಿ 20 ಲಕ್ಷ ಜನ ಪದವಿ ಪಾಸಾಗುತ್ತಾರೆ. ಆದರೆ ವರ್ಷದಲ್ಲಿ ಸರಕಾರಿ ಹುದ್ದೆ ಕೇವಲ 4 ಸಾವಿರ ಮಾತ್ರ ಭರ್ತಿಮಾಡಿಕೊಳ್ಳಲಾಗುತ್ತದೆ. 4 ಜವಾನ ಹುದ್ದೆಗಳಿದ್ದರೆ ಪಿಎಚ್ ಡಿ, ಎಂಜಿನಿಯರ್ ಪದವಿ ಪಡೆದವರು ಲಕ್ಷಾಂತರ ಸಂಖ್ಯೆಯಲ್ಲಿ ನೌಕರಿ ಬಯಸಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಸ್ವಾವಲಂಬಿ ಜೀವನ ಮಾಡುವ ಮೂಲಕ ಬೇರೆಯವರಿಗೆ ಕೆಲಸ ಕೊಡುವ ಗೋಜಿಗೆ ಹೋಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದರು. ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿದರು.

ಈ ಸಂದರ್ಭದಲ್ಲಿ ಎಬಿವಿಪಿ ಪ್ರಮುಖ ಅಶೋಕ ಶೆಂಬೆಳ್ಳೆ ಸ್ವಾಗತಿಸಿ ಮಾತನಾಡಿದರು. ಕಾರ್ಯಕ್ರಮ ಅಧ್ಯಕ್ಷತೆ ಪ್ರಾಂಶುಪಾಲ ಅಖಿಲ್ ವಹಿಸಿದರು. ಕು. ಆಯೇಶಾ ನಿರೂಪಿಸಿದರು. ಉಪನ್ಯಾಸಕ ಅನಿಲ ವಂದಿಸಿದರು.


ಪರವಾನಗಿ ಇಲ್ಲದೆ ವಾಹನ ಚಾಲನೆ ಅಪರಾಧ

ಚಾಲನಾ ಪರವಾನಗಿ ಹಾಗೂ ವಿಮೆ ಇಲ್ಲದೇ ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧ. ಅವುಗಳಿದ್ದರೆ ಮಾತ್ರವೇ ವಾಹನ ಚಾಲನೆಗೆ ಮುಂದಾಗಬೇಕು ಎಂದು ಸಿಪಿಐ ರಘುವೀರಸಿಂಗ್ ಠಾಕೂರ್ ಹೇಳಿದರು. ವಾಹನ ಅಪಘಾತಗಳಿಂದ ಹಲವರು ಪ್ರಾಣ ಕಳೆದುಕೊಳ್ಳುತ್ತಿರುವುದು ನೋವಿನ ವಿಚಾರ. ಸಾಕಷ್ಟು ಪ್ರಕರಣಗಳಲ್ಲಿ ಸವಾರರು ಚಾಲನಾ ಪರವಾನಗಿಯೇ ಹೊಂದಿರುವುದಿಲ್ಲ. ಹೆಲ್ಮೆಟ್ ಹಾಕದೆ ಎಷ್ಟೊ? ದ್ವಿಚಕ್ರ ಸವಾರರು ಅಪಘಾತಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೇವಲ ಪೆÇಲೀಸರು ದಂಡ ಹಾಕುತ್ತಾರೆಂಬ ಕಾರಣಕ್ಕೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕುವ ಬದಲು ತಮ್ಮ ಪ್ರಾಣ ಕಾಪಾಡಿಕೊಳ್ಳುವ ಸಲುವಾಗಿ ಹಾಕಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.