ಸ್ವಾವಲಂಬನೆಯ ಸಾಕಾರ ಮೂರ್ತಿಗಳು ಶಿವ ಶರಣೆಯರು -ಡಾ. ಸಿ.ಕೊಟ್ರಪ್ಪ


ಸಂಜೆವಾಣಿ ವಾರ್ತೆ
ಬಳ್ಳಾರಿ, ಜ.22: ಮಹಿಳೆಯರು ಸಮಾಜದ ತಾಯಿ ಬೇರುಗಳಂತೆ. ಸಮಾಜದ ಸ್ವಾಸ್ಥತೆಯಿರುವುದು ಹೆಂಗಳೆಯರ ನಡೆ, ನುಡಿ, ಆಚಾರ-ವಿಚಾರಗಳಲ್ಲಿ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತಿಗಿಂತ, ಹೆಣ್ಣೊಬ್ಬಳು ಕಲಿತರೆ ಜನಾಂಗವೊಂದು ಸುಧಾರಿಸಿದಂತೆ ಎಂದು ಹೇಳಬಹುದು ಎಂದು ನಗರದ ರೇಡಿಯೋ ಪಾರ್ಕಿನ ಬಾಲಕಿಯರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ.ಸಿ.ಕೊಟ್ರಪ್ಪ ನವರು ನುಡಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕಂಬಳಿ ಬಜಾರಿನಲ್ಲಿಯ ಸಕ್ಕರೆ ಕರಡೀಶ ಬಾಲಕಿಯರ ಉಚಿತ ವಸತಿ ಮತ್ತು ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ 297ನೇ ಮಹಾಮನೆ ಲಿಂ. ಹಾವಿನಾಳು ಬಸಣ್ಣ, ರುದ್ರಮ್ಮ ದತ್ತಿ ಮತ್ತು ಲಿಂ. ಯಲೆ ಮಲ್ಲೇಶಪ್ಪ, ಯಡವಳ್ಳಿ ಪಂಚಾಕ್ಷರಪ್ಪ ದತ್ತಿ ಕಾರ್ಯಕ್ರಮದಲ್ಲಿ “ಶಿವ ಶರಣೆಯರ ಸ್ವಾವಲಂಬನೆಯ ಸೂತ್ರಗಳು” ವಿಷಯ ಕುರಿತು ಮಾತನಾಡುತ್ತಾ,ಶಿವ ಶರಣೆಯರು ಕಾಯಕ ನಿಷ್ಟರಾಗಿ ದಾಸೋಹ ಭಾವನೆಯಿಂದ ಸ್ವಾವಲಂಬಿಗಳಾಗಿ ಜೀವಿಸಿದ್ದರು.ಸಮಾಜದ ಶ್ರೇಯಸ್ಸಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ಧ ಸಾದ್ವಿಗಳಾಗಿದ್ದರೆಂದರು. ಅಂತೆಯೇ ಕದಳಿ ಮಹಿಳಾ ವೇದಿಕೆಯ ಸದಸ್ಯೆಯರು ತಮ್ಮ ಗೃಹ ಕೃತ್ಯ ಕಾಯಕದ ಜೊತೆಗೆ ಸಮಾಜದ ಶ್ರೇಯಸ್ಸಿಗಾಗಿ ಸ್ವ ಪ್ರೇರಣೆಯಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಳ್ಳಾರಿ ಜಿಲ್ಲೆಯ ನೂತನ ಕದಳಿ ಮಹಿಳಾ ವೇದಿಕೆಯ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಕಾಯಕ ದೀಕ್ಷಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದ ಶ್ರೀಧರಗಡ್ಡೆಯ ಕೊಟ್ಟೂರು ಸ್ವಾಮಿ ಶಾಖಾ ಮಠದ ಪೂಜ್ಯರಾದ ಶ್ರೀ ಮ.ನಿ.ಪ್ರ ಮರಿಕೊಟ್ಟೂರು ಸ್ವಾಮಿಗಳು ಜಿಲ್ಲೆಯ ಐದು ತಾಲೂಕುಗಳ ಕದಳಿ ವೇದಿಕೆ ಅಧ್ಯಕ್ಷರುಗಳಿಗೆ ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಿಗೆ ವಚನ ಕೃತಿಗಳನ್ನು ನೀಡಿ ಸದಸ್ಯೆಯರಿಗೆ ಕರ್ತವ್ಯ ಬೋಧನೆ ಮಾಡಿದರು.
ಪ್ರಸಾದ ನಿಲಯದ ಅಧ್ಯಕ್ಷರಾದ ಮೆಟ್ರಿ ಮೃತ್ಯುಂಜಯ ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಉಚಿತ ಪ್ರಸಾದ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ದೊರೆಯುವ ಸಂಸ್ಕಾರದ ಮಹತ್ವ ತಿಳಿಸಿದರು.
ವೇದಿಕೆಯಲ್ಲಿ ಶ. ಸಾ. ಪ. ದ ಕಂಪ್ಲಿ ತಾಲೂಕು ಅಧ್ಯಕ್ಷರಾದ ಜಿ.ಪ್ರಕಾಶ್, ಸಿರುಗುಪ್ಪ ತಾಲ್ಲೂಕು ಅಧ್ಯಕ್ಷರಾದ ಜೆ.ನಾಗೇಂದ್ರಗೌಡ, ಕುರುಗೋಡು ತಾಲೂಕು ಅಧ್ಯಕ್ಷರಾದ ಉಮಾಪತಿ ಗೌಡ, ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಗೌಡರ ನೀಲಾಂಬಿಕೆ, ಉಪಾಧ್ಯಕ್ಷರಾದ ಸುಶೀಲ್ ಸಿರೂರು, ಸಹ ಕಾರ್ಯದರ್ಶಿ ಎನ್, ಸುಮಿತ್ರಾ ಮಹೇಂದ್ರ, ಖಜಾಂಚಿ ಯು, ಅಶ್ವಿನಿ, ಗೌರವ ಸಲಹೆಗಾರರಾದ ಎನ್.ಡಿ.ವೆಂಕಮ್ಮ, ಡಾ. ಎ.ಎನ್.ಸಿದ್ದೇಶ್ವರಿ, ಕದಳಿ ವೇದಿಕೆ ಬಳ್ಳಾರಿ ತಾಲೂಕು ಅಧ್ಯಕ್ಷೆ ಈರಮ್ಮ, ಸಿರಗುಪ್ಪ  ತಾಲೂಕು ಅಧ್ಯಕ್ಷೆ ತ್ರಿವೇಣಿ, ಕುರುಗೋಡು ತಾಲೂಕು ಅಧ್ಯಕ್ಷೆ ಲಲಿತಮ್ಮ, ಸಂಡೂರು ತಾಲ್ಲೂಕಿನ ಕುಸುಮ ಹಿರೇಮಠ್, ನಿಲಯ ಪಾಲಕಿಯರಾದ ಶಿಲ್ಪ, ಉಪಸ್ಥಿತರಿದ್ದರು.
ದತ್ತಿ ದಾಸೋಹಿಗಳಾದ ಹಾವಿನಾಳ ಸೂಗಪ್ಪ ಮತ್ತು ಬಿ,ಪಿ,ಯಡವಳ್ಳಿಯವರು ವೇದಿಕೆಯ ಅತಿಥಿಗಳನ್ನು ಸನ್ಮಾನಿಸಿದರು. ಬಿ,ಇ, ವಿದ್ಯಾರ್ಥಿನಿ ಲಿಂಗ ಶ್ರೀ ಪ್ರಾರ್ಥನೆ ಮಾಡಿದರು. ಬಿಎಸ್ಸಿ ವಿದ್ಯಾರ್ಥಿನಿ ಆರತಿ ಸ್ವಾಗತ ಕೋರಿದರು. ಬಿಎಸ್ಸಿ ವಿಧ್ಯಾರ್ಥಿನಿ ರಕ್ಷಿತ ವಂದನೆ ಸಲ್ಲಿಸಿದರು. ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ಮಾತನಾಡಿ ದತ್ತಿ ಧಾತೃಗಳನ್ನು ಪರಿಚಯಿಸಿದರು. ಬಿಕಾಂ ವಿಧ್ಯಾರ್ಥಿನಿ ವಿದ್ಯ ಮತ್ತು ಎಂಎಸ್ಸಿ ವಿದ್ಯಾರ್ಥಿನಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಹಾವಿನಾಳ ಹಾಗೂ ಯಡವಳ್ಳಿ ಕುಟುಂಬದ ಸದಸ್ಯರು, ಸಂಡೂರು ವೀರಣ್ಣ, ಹಂಪನಗೌಡ, ಜೀರಾ ಗುರುಮೂರ್ತಿ, ಪಂಪಾರೆಡ್ಡಿ, ಗುರುಪಾದಯ್ಯ, ಶ್ರೀಧರ ಗಡ್ಡಿ, ವೀರನಗೌಡ ಮುಂತಾದ ಗಣ್ಯರು, ವಿವಿಧ ತಾಲೂಕುಗಳ ಕದಳಿ ವೇದಿಕೆ ಸದಸ್ಯರು ಉಪಸ್ಥಿತರಿದ್ದರು.