ಸ್ವಾವಲಂಬನೆಯೇ ಸ್ತ್ರೀಗೆ ಶಕ್ತಿ – ಡಾ|| ಜ್ಯೋತಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.13: ಸ್ವಾರ್ಥ ತುಂಬಿದ ಇಂದಿನ ಜಗತ್ತಿನಲ್ಲಿ ಮನುಷ್ಯನು ಗುಣಕ್ಕಿಂತಲೂ ಹಣಕ್ಕೆ ವಿಶೇಷ ಬೆಲೆಯನ್ನು ಕೊಡುತ್ತಿರುವುದನ್ನು ನೋಡಿದರೆ, ವಿವೇಕ ಶೂನ್ಯ ಮಾನವನು ಪ್ರಾಣಿಗಳಿಂದ ಪ್ರೀತಿ, ಕರುಣೆ, ಅನುಕಂಪ, ಸಹಾಯ, ಸಹಕಾರ ಮುಂತಾದ ಮೌಲ್ಯಗಳನ್ನು ಕಲಿಯಬೇಕಾಗಬಹುದೇನೋ ಅನಿಸುತ್ತದೆ. ಮೌಲ್ಯಾಧಾರಿತ ಬದುಕಿಗೆ ತಿಲಾಂಜಲಿ ಇತ್ತು ಯಾಂತ್ರಿಕ ಬದುಕಿಗೆ ಮೊರೆಯೋಗಿರುವ ಮಾನವನಿಗೆ ಶಿವ ಶರಣರ ಬದುಕನ್ನು ಪರಿಚಯಿಸುವ ಸಕಾಲ ಈಗ ಒದಗಿಬಂದಿದೆ ಎಂದು ಆರ್.ಬಿ.ಎಸ್.ಕೆ. ಮೆಡಿಕಲ್ ಆಫೀಸರ್, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಎಲ್.ಜ್ಯೋತಿಯವರು ಅಭಿಪ್ರಾಯಪಟ್ಟರು.
ಬಳ್ಳಾರಿಯ ಕಂಬಳಿ ಬಜಾರಿನಲ್ಲಿರುವ ಸಕ್ಕರಿ ಕರಡೀಶ ಮಹಾಮನೆಯ ಬಾಲಕಿಯರ ಉಚಿತ ವಸತಿ ಮತ್ತು ಪ್ರಸಾದ ನಿಲಯದಲ್ಲಿ, ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ 277ನೇ ಮಹಾಮನೆ ಲಿಂ|| ಹಾವಿನಾಳು ಬಸಣ್ಣ ರುದ್ರಮ್ಮ ದತ್ತಿ ಮತ್ತು ಲಿಂ. ಯಲೆ ಮಲ್ಲೇಶಪ್ಪ, ಯಡವಳ್ಳಿ ಪಂಚಾಕ್ಷರಪ್ಪ ದತ್ತಿ ಕಾರ್ಯಕ್ರಮದಲ್ಲಿ ಸ್ವಾವಲಂಬನೆ ಮತ್ತು ಶಿವಶರಣರು, ವಿಷಯ ಕುರಿತು ಮಾತನಾಡುತ್ತಾ, ರಾಜಸತ್ತೆಯ ಕಾಲದಲ್ಲಿ ಪ್ರಜಾಪ್ರಭುತ್ವದ ಬೀಜ ಬಿತ್ತಿದವರು ಶರಣರು. ದಾಸ್ಯದ ಬದುಕಿನಿಂದ ಧನಿಕ ತನದಲ್ಲಿ ಬದುಕುವಂತೆ ಮಾಡಿ, ಕಲ್ಯಾಣ ರಾಜ್ಯ ಸ್ಥಾಪನೆಗೆ ಕಾರಣರಾದರು. ಇದು ಸಾಧ್ಯವಿದ್ದದ್ದು, ಸ್ವಾವಲಂಬನೆಯಿಂದ. ಹೀಗಾಗಿ ಶರಣರು ಸ್ವಾವಲಂಬನೆಯ ಸಾಕಾರ ರೂಪ ಎನ್ನಬಹುದು. ಸ್ತ್ರೀಯರು ಕುಟುಂಬದ ಆರೋಗ್ಯದ ಜೊತೆ ತಮ್ಮ ವೈಯಕ್ತಿಕ ಆರೋಗ್ಯಕ್ಕೆ ಹೆಚ್ಚು ಗಮನ ಕೊಡುತ್ತಾ, ಧನಾತ್ಮಕ ಚಿಂತನೆಯೊಂದಿಗೆ ಸ್ವಾವಲಂಬಿಗಳಾಗಿ ಬಾಳಬೇಕು ಎಂದು ಕರೆಕೊಟ್ಟರು.
ಬಳ್ಳಾರಿ ಜಿಲ್ಲಾ ಅ. ಭಾ. ವೀ. ಲಿಂ. ಮಹಾಸಭಾದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ವನಜ, ಆಯ್ದಕ್ಕಿ ಲಕ್ಕಮ್ಮ, ಮೋಳಿಗೆ ಮಹಾದೇವಿ, ಹಡಪದ ಲಿಂಗಮ್ಮರಂತೆ ಬಾಲಕಿಯರು ಸ್ವತಂತ್ರ ವಿಚಾರಶೀಲರಾಗಿ ಕೌಟುಂಬಿಕ ಬದುಕನ್ನು ಬಾಳಬೇಕೆಂದು ತಮ್ಮ ಅತಿಥೇಯ ನುಡಿಗಳನ್ನಾಡಿದರು. ನಿವೃತ್ತ ಅಭಿಯಂತರರು, ಪ್ರಸಾದ ನಿಲಯದ ಟ್ರಸ್ಟಿಗಳು ಆದ ಪಾಲಾಕ್ಷರೆಡ್ಡಿಯವರು ಅಧ್ಯಕ್ಷತೆ ವಹಿಸಿದ್ದರು.
ಬಿಇಡಿ ವಿದ್ಯಾರ್ಥಿನಿ ನಾಗರತ್ನ, ಬಿ.ಇ. ವಿದ್ಯಾರ್ಥಿನಿ ಶಾಂತಿಯವರು ವಚನ ಪ್ರಾರ್ಥನೆ ಮಾಡಿದರು. ಬಿಕಾಂ ವಿದ್ಯಾರ್ಥಿನಿ ಸುನೀತ ಪ್ರಾಸ್ತಾವಿಕ ಮಾತನಾಡಿದರು. ಬಿ.ಎಸ್ಸಿ. ವಿದ್ಯಾರ್ಥಿನಿ ನೇತ್ರಾವತಿ ಸ್ವಾಗತ ಕೋರಿದರು. ಪರಿಷತ್ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ದತ್ತಿ ದಾಸೋಹಿಗಳನ್ನು ಪರಿಚಯಿಸಿ, ಶರಣು ಸಮರ್ಪಣೆ ಮಾಡಿದರು. ಅಕ್ಷತ, ದೀಪ ಕಾರ್ಯಕ್ರಮ ನಿರ್ವಹಣೆ ಮಾಡಿದರು. ದತ್ತಿ ದಾಸೋಹಿಗಳಾದ ಹಾವಿನಾಳ ಶರಣ ಬಸಪ್ಪ, ಬಿ.ಪಿ.ಯಡವಳ್ಳಿಯವರು ವೇದಿಕೆಯಲ್ಲಿದ್ದರು. ಜೀರ ಗುರುಮೂರ್ತಿ, ಗುರುಪಾದಯ್ಯ, ಎಲೆ ಅಯ್ಯಪ್ಪ, ಮಂಜುನಾಥ, ಅರಸೂರು ವಿಶ್ವನಾಥ್, ಹಾವಿನಾಳು ಕುಟುಂಬದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಿಗೆ ಲಿಂಗಾಷ್ಟಕ ಪುಸ್ತಕ, ಪೆನ್ನುಗಳ ವಿಚಾರಣೆಯೊಂದಿಗೆ ಕಾರ್ಯಕ್ರಮ ಮಂಗಲವಾಯಿತು.