ಕಲಬುರಗಿ:ಜೂ.2: ರೈತರು ಸಂಪೂರ್ಣವಾಗಿ ಕೃಷಿಯನ್ನೇ ಅವಲಂಬಿಸಿದರೆ ಪ್ರಕೃತಿ ಏರಿಳತಗಳಿಂದ ನಿರಿಕ್ಷಿತ ಫಸಲು ಪಡೆಯದೆ ನಷ್ಟವಾಗುತ್ತದೆ. ಕೃಷಿ ಜೊತೆಗೆ ಪೂರಕ ಕಸುಬಾದ ಹೈನುಗಾರಿಕೆಯು ನಷ್ಟದ ಸಂದರ್ಭದಲ್ಲಿ ಸಹಾಯವಾಗುತ್ತದೆ. ಹೈನುಗಾರಿಕೆಯಿಂದ ಆರ್ಥಿಕ ಸ್ಥಿತಿ ಸದೃಢವಾಗಿ ಸ್ವಾವಲಂಬನೆಯುತ ಜೀವನ ಸಾಗಿಸಲು ಸಾಧ್ಯವಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ವಿಶ್ವ ಕ್ಷೀರ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಕೃಷಿ ಜೊತೆಗೆ ಹೈನುಗಾರಿಕೆಗೆ ಆದ್ಯತೆಯನ್ನು ನೀಡಿ ಹಾಲಿನ ಉತ್ಪಾದಕತೆಯನ್ನು ವೃದ್ಧಿಗೊಳಿಸುವದರ ಜೊತೆಗೆ, ಅದನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಎಲ್ಲರಿಗೂ ದೊರೆಯುವಂತೆ ಮಾಡುವುದು ಅಗತ್ಯವಾಗಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಭೀಮಾಶಂಕರ ಎಸ್.ಘತ್ತರಗಿ ಮಾತನಾಡಿ, ಡಾ.ವರ್ಗಿಸ್ ಕುರಿಯನ್ ಅವರನ್ನು ‘ಶ್ವೇತ ಕ್ರಾಂತಿಯ ಪಿತಾಮಹ’ ಎಂದು ಕರೆಯಲಾಗುತ್ತದೆ. ಹಾಲು ಅಮೃತಕ್ಕೆ ಸಮಾನ. ಎಲ್ಲಾ ಪೋಷಕಾಂಶಗಳುಳ್ಳ ಸಮತೋಲಿತ ಆಹಾರವಾಗಿದೆ. ವಿಶ್ವದಲ್ಲಿ ಇಂದಿಗೂ ಕೂಡಾ ಅನೇಕ ಮಕ್ಕಳು ಹಾಲಿನ ಲಭ್ಯತೆಯಿಂದ ವಂಚಿತರಾಗಿ ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಹಾಲಿನ ಸಮರ್ಪಕ ಬಳಕೆ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ, ವಿಜಯಲಕ್ಷ್ಮೀ ಪಾಟೀಲ್, ಉರ್ಮಿಳಾ ಗಾಯಕವಾಡ್, ಪ್ರೀಯಾಕಾ ಜಾಧವ, ಲಕ್ಷ್ಮಣ ಭೋವಿ, ಶಿವಶರಣಪ್ಪ ಕಲಶೆಟ್ಟಿ, ವೈಷ್ಣವಿ ಮಂಡ್ರಿ ಹಾಗೂ ವಿದ್ಯಾರ್ಥಿಗಳಿದ್ದರು.