ಸ್ವಾವಲಂಬನೆಯತ್ತ ರೈತರ ಚಿತ್ತ ಸಾಗಬೇಕು: ಶಾಸಕ ಸಂಜೀವ ಮಠಂದೂರು

ಕೃಷಿ ಇಲಾಖೆ ವತಿಯಿಂದ ಟಿಲ್ಲರ್ ವಿತರಣೆ

ಪುತ್ತೂರು, ಎ.೭- ಭತ್ತದ ಬೇಸಾಯದಿಂದ ರೈತರು ದೂರವಾದ ಕಾರಣ ನಮ್ಮ ಆಹಾರವಾಗಿರುವ ಅಕ್ಕಿಯನ್ನು ಬೇರೆ ಜಿಲ್ಲೆಗಳಿಂದ ತಂದು ತಿನ್ನಬೇಕಾದ ಸ್ಥಿತಿ ಪ್ರಸ್ತುತ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆಯಲ್ಲಿ ದಕ ಜಿಲ್ಲೆ ಮತ್ತೆ ಸ್ವಾವಲಂಬನೆಯನ್ನು ಕಾಣಬೇಕಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

 ಮಂಗಳವಾರ ಇಲ್ಲಿಯ ಕೃಷಿ ಇಲಾಖೆ ವತಿಯಿಂದ ಇಲಾಖೆಯಲ್ಲಿ ಮೂರು ಜನ ಫಲಾನುಭವಿಗಳಿಗೆ  ಕೃಷಿ ಯಂತ್ರೋಪಕರಣವಾದ ಟಿಲ್ಲರ್ ವಿತರಣೆ ಮಾಡಿ ಅವರು ಮಾತನಾಡಿದರು.

ಕೃಷಿ ಕೂಲಿ ಕಾರ್ಮಿಕರ ಕೊರತೆ ಹೆಚ್ಚುತ್ತಿರುವ ಇಂದು ಭತ್ತದ ಬೆಳೆಗೆ ಯುವಜನತೆ ಯಾಂತ್ರೀಕೃತ ಚಿಂತನೆ ನಡೆಸಬೇಕು. ನಮ್ಮ ಆಹಾರ ಪದಾರ್ಥಗಳನ್ನು ತಾವೇ ಉತ್ಪಾದನೆ ಮಾಡಿಕೊಳ್ಳುವ ಮೂಲಕ ಸ್ವಾವಲಂಬನೆ ಕಾಣಬೇಕು. ಕೃಷಿಕ ಸಮಾಜಕ್ಕೆ ಸರ್ಕಾರದಿಂದ ಟಿಲ್ಲರ್ ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸದಸ್ಯ ಹರೀಶ್ ಬಿಜತ್ರೆ, ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ, ಕೃಷಿ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಂತರ ಶಾಸಕರ ನೇತೃತ್ವದಲ್ಲಿ ಕೃಷಿಕ ಸಮಾಜದ ಸಭೆ ನಡೆಯಿತು.