ಸ್ವಾರ್ಥ ಬಿಟ್ಟು ಸೇವಾ ಮನೋಭಾವ ಬೆಳೆಸಿಕೊಳ್ಳಲು ಕರೆ

ಕುಣಿಗಲ್, ಆ. ೧೨- ಯುವ ಜನಾಂಗ ಆಸೆ ಆಮಿಷಕ್ಕೆ ಬಲಿಯಾಗದೆ, ಆಧುನಿಕ ಜೀವನ ಶೈಲಿಗೆ ಮಾರು ಹೋಗದೆ, ಸ್ವಾರ್ಥ ಭಾವನೆ ಬಿಟ್ಟು, ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಡಿವೈಎಸ್‌ಪಿ ಲಕ್ಷ್ಮಿಕಾಂತ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಶೆಟ್ಟಿಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸೇವೆ, ತ್ಯಾಗ, ಸಹಕಾರ, ಸೌಹಾರ್ದ ಮುಂತಾದ ಗುಣಗಳು ಯುವಕರಲ್ಲಿದ್ದಾಗ ವಿಶಾಲ ಮನೋಭಾವ ಬೆಳೆದು ವೈವಿಧ್ಯಮಯ ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿಯಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು ಕಂಡ ಕನಸನ್ನು ನನಸು ಮಾಡಲು ಯುವ ಜನಾಂಗ ಪಣತೊಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಆರ್. ಪುಟ್ಟರಾಜು ಮಾತನಾಡಿ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಎನ್‌ಎಸ್‌ಎಸ್ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಬದುಕನ್ನು ಕಟ್ಟಿಕೊಳ್ಳಲು ಇಂತಹ ಶಿಬಿರಗಳು ಯಶಸ್ವಿಯಾಗುತ್ತವೆ ಎಂದರು.
ಸಮಾರಂಭದಲ್ಲಿ ಹೆಬ್ಬೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಿ ಕೃಷ್ಣ, ಪ್ರಾಧ್ಯಾಪಕರಾದ ಡಾ. ಎಂ. ಗೋವಿಂದರಾಯ, ಹನುಮಂತಪ್ಪ, ಪ್ರೊ. ನಾಗಮ್ಮ, ಯುವ ಮುಖಂಡ ರಮೇಶ್, ಶಿಕ್ಷಕರಾದ ನರೇಶ್, ವಿಜಯರಾಘವನ್, ಕಾಲೇಜಿನ ಪ್ರಾಧ್ಯಾಪಕ ಮಂಜುಸ್ವಾಮಿ, ರವಿಕುಮಾರ್, ಡಾ. ಎಸ್. ವಿಶ್ವೇಶ್ವರಯ್ಯ, ಡಾ. ಲಕ್ಷ್ಮಿನರಸಮ್ಮ, ರುಕ್ಷ್ಮಿಣಿ, ರೇಣುಕಾ ಉಪಸ್ಥಿತರಿದ್ದರು.