ಸ್ವಾರ್ಥಿಗಳ ಹಿಡಿತದಿಂದ ಎಕೆಬಿಎಂಎಸ್‌ಅನ್ನು ಮುಕ್ತವಾಗಿಸಿ

ಕೋಲಾರ, ನ.೧೨: ವಿಪ್ರಸಂಘಟನೆಯ ಶಕ್ತಿಯಾಗಬೇಕಾಗಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇಂದು ಕೆಲವೇ ವ್ಯಕ್ತಿಗಳ ಹಿಡಿತದಲ್ಲಿ ಸಿಲುಕಿ ಸಮುದಾಯಕ್ಕೆ ಶಾಪವಾಗಿದೆ, ಇದನ್ನು ಮತ್ತೆ ಪುನಶ್ಚೇತನಗೊಳಿಸಿ ಸಮಾಜದ ಸದೃಢಶಕ್ತಿಯಾಗಿಸುವ ನಮ್ಮ ಪ್ರಯತ್ನಕ್ಕೆ ಸಹಕಾರ ನೀಡಿ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಬ್ರಾಹ್ಮಣ ಸಮುದಾಯಕ್ಕೆ ಕರೆ ನೀಡಿದರು.
ಮಹಾಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಕೋಲಾರ ಅವಿಭಜಿತ ಜಿಲ್ಲೆಯ ಚಿಂತಾಮಣಿ, ಚಿಕ್ಕಬಳ್ಳಾಪುರ,ಬಾಗೇಪಲ್ಲಿ,ಗುಡಿಬಂಡೆಗಳಲ್ಲಿ ಅಧ್ಯಕ್ಷ ಆಕಾಂಕ್ಷಿ ರಘುನಾಥ್ ಪರ ಪ್ರತ್ಯೇಕ ಸಭೆ ನಡೆಸಿ, ಗುಡಿಬಂಡೆಯ ಗಾಯತ್ರಿ ಮಂದಿರದಲ್ಲಿ ಅಲ್ಲಿನ ಬ್ರಾಹ್ಮಣ ಸಂಘ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕೆಲವು ವ್ಯಕ್ತಿಗಳು ಮಹಾಸಭಾವನ್ನು ತಮ್ಮ ಪಿತ್ರಾರ್ಜಿತ ಆಸ್ತಿಯೆಂದುಕೊಂಡಿದ್ದಾರೆ, ಮತ ನೀಡುವ ಹಕ್ಕು ಇರುವ ಪ್ರತಿಯೊಬ್ಬರಿಗೂ ಪದಾಧಿಕಾರಿಯಾಗಲು ಇರುವ ಅವಕಾಶವನ್ನು ತಾವೇ ಸೃಷ್ಟಿಸಿಕೊಂಡಿರುವ ಬೈಲಾ ಮೂಲಕ ಕಸಿದುಕೊಂಡು ನಿರಂತರವಾಗಿ ಸಮುದಾಯಕ್ಕೆ ವಂಚನೆ ಮಾಡಿಕೊಂಡು ಬಂದಿದ್ದಾರೆ ಎಂದು ಟೀಕಿಸಿದರು.
ಬ್ರಾಹ್ಮಣರ ಬ್ಯಾಂಕ್ ಎಂಬ ನಂಬಿಕೆಯಿಂದ ಬೇರೆಯವರೂ ದುಡ್ಡು ಇಟ್ಟಿದ್ದಾರೆ, ಇಲ್ಲಿ ನಡೆದಿರುವ ವಂಚನೆಯಿಂದ ೫೦ ಸಾವಿರ ಕುಟುಂಬಗಳಿಗೆ ಅನ್ಯಾಯವಾಗಿದೆ, ಮಹಾಸಭಾವನ್ನು ಪಾರ್ಟ್‌ಟೈಂ ಜಾಬ್ ಆಗಿಸಿಕೊಂಡಿರುವವರನ್ನು ದೂರವಿಟ್ಟು, ಮಹಾಸಭಾ ಹಾಗೂ ಬ್ರಾಹ್ಮಣರಿಗಾಗಿ ದಿನಪೂರ್ತಿಕೆಲಸ ಮಾಡುವ ರಘುನಾಥ್‌ರಂತಹ ಪ್ರಾಮಾಣಿಕರನ್ನು ಆಯ್ಕೆ ಮಾಡೋಣ ಎಂದರು.
ಕೇವಲ ಪದಾಧಿಕಾರಿಗಳಾದವರಿಗೆ ಮಾತ್ರವೇ ಮತ್ತೆ ಚುನಾವಣೆಗೆ ನಿಲ್ಲುವ ಅವಕಾಶವಿರುವ ಪ್ರಜಾಪ್ರಭುತ್ವಕ್ಕೆ ವಿರುದ್ದವಾದ ಮಹಾಸಭಾ ಬೈಲಾ ತಿದ್ದುಪಡಿ ಮಾಡಿ ಪ್ರತಿ ಸದಸ್ಯನಿಗೂ ಸ್ವರ್ಧಿಸುವ ಮತ್ತು ಅನ್ಯಾಯವನ್ನು ಪ್ರಶ್ನಿಸುವ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ಮಹಾಸಭಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರಘುನಾಥ್ ಮಾತನಾಡಿ, ೨೩ ಅಂಶಗಳ ಚುನಾವಣಾ ಪ್ರಣಾಳಿಕೆ ನೀಡಿದ್ದೇನೆ ಅದರಂತೆ ನಡೆಯುತ್ತೇನೆ, ಸಮುದಾಯದ ಏಳ್ಗೆಗೆ ಹಗಲಿರುಳು ಶ್ರಮಿಸುವ ಸಂಕಲ್ಪ ನನ್ನದಾಗಿದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶುಕ್ಲ ಯಾಜ್ಞವಲ್ಕ್ಯಮಹಾಮಂಡಳಿ ಅಧ್ಯಕ್ಷ ಹಾಗೂ ಖ್ಯಾತ ವಕೀಲ ಸುಧಾಕರಬಾಬು, ಬಿ.ವಿ.ಕುಮಾರ್, ಉಲಚುಕಮ್ಮೆ ಸಮುದಾಯದ ಅಧ್ಯಕ್ಷ ವಿ.ಮಂಜುನಾಥ್,ಸಿರಿನಾಡು ಸಂದ ಸುದರ್ಶನ್, ನಾಗಭೂಷಣ್, ಆಡಿಟರ್ ವೈ.ಎನ್.ಶರ್ಮಾ,ಕೆ.ರವಿಕುಮಾರ್,ಶ್ರೀಶಸಿಂಹಭಟ್, ಭುವನಾ ನಾಗೇಶ್,ಶಂಕರ್ ದೀಕ್ಷಿತ್, ಸುಬ್ರಹ್ಮಣ್ಯಶಾಸ್ತ್ರಿ, ರವೀಂದ್ರ, ಸಾದು ಪುರುಷೋತ್ತಮ್, ನಿರಂಜನ್, ಮಧುಸೂಚನ್, ವಾಹಿನಿ ಸುರೇಶ್ ಮತ್ತಿತರರಿದ್ದರು.