ಸ್ವಾರ್ಥಕ್ಕಾಗಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ

(ಸಂಜೆವಾಣಿ ಪ್ರತಿನಿಧಿಯಿಂದ)
ನಗರದ ಕೆಂಗೇರಿಯ ಸೂಲಿಕೆರೆ ಮೈದಾನದಲ್ಲಿ ಇಂದು ಏರ್ಪಡಿಸಿದ್ದ ವಿಧಾನ ಪರಿಷತ್‌ಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಪುಟ್ಟಣ್ಣನವರ ಕೃತಜ್ಞತಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎನ್. ಚಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಮತ್ತಿತರರು ಭಾಗವಹಿಸಿದ್ದರು.

ಬೆಂಗಳೂರು,ಮಾ.೧೦:ಜಾತ್ಯಾತೀತ ಜನತಾದಳ ಹಾಗೂ ಬಿಜೆಪಿ ನಡುವಿನ ಮೈತ್ರಿ ಅಪವಿತ್ರ, ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಕುಟುಂಬದ ರಾಜಕೀಯ ಉಳಿವಿಗಾಗಿ ಈ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪಕ್ಷದ ಉಳಿವಿಗೆ ಬಿಜೆಪಿ ಜತೆ ಸೇರಿದ್ದೇವೆ ಎಂದು ದೇವೇಗೌಡರು ಹೇಳುತ್ತಿದ್ದಾರೆ. ನೀವೆಲ್ಲ ಶಿಕ್ಷಕರು ಪ್ರಜ್ಞಾವಂತರು, ದೇವೇಗೌಡರ ಮಾತನ್ನು ತುಲನೆ ಮಾಡಿ ವಿಮರ್ಶೆ ಮಾಡಿ ಡಾರ್ವಿನ್ ಸಿದ್ಧಾಂತದ ಪ್ರಕಾರ ಬಲಿಷ್ಠರ ಉಳಿವು ಎಂಬ ಮಾತಿದೆ ಎಂಬುದನ್ನು ನೆನಪು ಮಾಡಿದ ಸಿದ್ದರಾಮಯ್ಯರವರು, ಆದರೆ, ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಉಳಿವಿಗೆ, ತಮ್ಮ ಕುಟುಂಬದ ರಾಜಕೀಯ ಉಳಿವಿಗಾಗಿ ಈ ಮೈತ್ರಿ ಮಾಡಿಕೊಂಡಿದ್ದಾರೆ ಅಷ್ಟೇ ಎಂದು ಟೀಕಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ನಾವು ಏನೇ ತೀರ್ಮಾನ ಮಾಡಿದರೂ ಅದನ್ನು ಜನ ಒಪ್ಪಿ ಕುರುಡರಂತೆ ನಮ್ಮ ತೀರ್ಮಾನವನ್ನು ಒಪ್ಪಿಕೊಳ್ಳುತ್ತಾರೆ ಎಂಬ ಭಾವನೆ ಹೊಂದಿದ್ದಾರೆ. ನಾವು ಏನು ಮಾಡಿದರೂ ಜನ ಒಪ್ಪಿಕೊಳ್ಳುತ್ತಾರೆ ಎಂಬ ಭಾವನೆ ಸರಿಯಲ್ಲ ಎಂದರು.
ಬೆಂಗಳೂರಿನ ಕೆಂಗೇರಿಯ ಸೂಲಿಕೆರೆ ಮೈದಾನದಲ್ಲಿಂದು ವಿಧಾನ ಪರಿಷತ್‌ನ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌ನ ಪುಟ್ಟಣ್ಣ ಅವರನ್ನು ಚುನಾಯಿಸಿದ್ದಕ್ಕೆ ಆಯೋಜಿಸಲಾಗಿದ್ದ ಶಿಕ್ಷಕರ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಬಿಜೆಪಿ ಜತೆ ಕೈ ಜೋಡಿಸಿರುವ ಜೆಡಿಎಸ್‌ನ ಮೈತ್ರಿಯ ಉದ್ದೇಶ ಅವರ ಕುಟುಂಬದ ರಾಜಕೀಯ ಉಳಿವು ಅಷ್ಟೇ ಬೇರೆ ಅಥವಾ ಜನ ಹಿತ ಇದರಲ್ಲಿ ಇಲ್ಲ ಎಂದರು.
ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿ ನಂತರವೂ ನೀವೆಲ್ಲ ನಿಮ್ಮ ವಿವೇಚನೆ ಬಳಸಿ ಕಾಂಗ್ರೆಸ್‌ನ ಪುಟ್ಟಣ್ಣ ಅವರನ್ನು ಗೆಲ್ಲಿಸಿ ಬಿಜೆಪಿ ಜತೆ ಅಪವಿತ್ರ ಮೈತ್ರಿ ಮಾಡಿಕೊಂಡಿರುವವರಿಗೆ ಪಾಠ ಕಲಿಸಿದ್ದೀರಿ, ನಿಮಗೆಲ್ಲ ನನ್ನ ಕೃತಜ್ಞತೆ ಎಂದರು. ನನಗೆ ಈ ಮೈತ್ರಿಯಿಂದ ಪುಟ್ಟಣ್ಣ ಸೋಲಬಹುದು ಎಂಬ ಭೀತಿ ಇತ್ತು, ಆದರೆ ನಿಮ್ಮ ತೀರ್ಪು ನಮ್ಮಲ್ಲಿ ಧೈರ್ಯ ತುಂಬಿದೆ.ಮುಂದೆ ಇದೇ ರೀತಿ ಮೈತ್ರಿ ಅಭ್ಯರ್ಥಿಗಳನ್ನು ಧಿಕ್ಕರಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಹೇಳಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನೇ ಪತನಗೊಳಿಸಿದ ಕೇಸರಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.ಈ ಮೈತ್ರಿಗೆ ಏನೆಂದು ಹೇಳೋಣ ಅಪವಿತ್ರ ಅಷ್ಟೇ ಅಲ್ಲ. ಸ್ವಾರ್ಥ ಸಾಧನೆ ಉದ್ದೇಶ ಅಷ್ಟೆ ಎಂದು ವ್ಯಂಗ್ಯವಾಡಿದರು.
ಮಾಜಿ ಪ್ರಧಾನಿ ದೇವೇಗೌಡರು ಈ ಹಿಂದೆ ಮುಂದಿನ ಜನ್ಮವಿದ್ದರೆ ತಾವು ಮುಸ್ಲಿಂ ಸಮುದಾಯದಲ್ಲಿ ಜನಿಸುತ್ತೇನೆ ಎಂದು ಹೇಳಿ, ಈಗ ಕೋಮುವಾದಿ ಪಕ್ಷದ ಜತೆ ಕೈ ಜೋಡಿಸಿದ್ದಾರೆ ಎಂದು ಅವರು ಕಿಡಿಕಾರಿದರು.
ಶಿಕ್ಷಕರ ಸಮಸ್ಯೆ, ವೇತನ ಆಯೋಗ ಜಾರಿಗೆ ಸಭೆ
ಶಿಕ್ಷಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಎಲ್ಲರ ಸಭೆ ಕರೆದು ಚರ್ಚೆ ನಡೆಸುತ್ತೇನೆ. ಪುಟ್ಟಣ್ಣ ಅವರ ಶಿಕ್ಷಕರ ಸಮಸ್ಯೆ ಬಗ್ಗೆ ಈಗಾಗಲೇ ನನ್ನ ಬಳಿ ಪ್ರಸ್ತಾಪಿಸಿದ್ದಾರೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರ ಸಭೆ ಕರೆಯುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡುವ ಬಗ್ಗೆಯೂ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.