ಸ್ವಾಮಿ ವಿವೇಕಾನಂದ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ ಅವರ ಜೀವನ ಯುವ ಜನಾಂಗಕ್ಕೆ ಆದರ್ಶಮಯ : ಪ್ರೊ. ದಯಾನಂದ ಅಗಸರ್

ಕಲಬುರಗಿ:ಜ.12:ಸ್ವಾಮಿ ವಿವೇಕಾನಂದ ಅವರು ಮತ್ತು ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರು ನಮ್ಮ ದೇಶದ ಬಹುದೊಡ್ಡ ವಿದ್ವಾಂಸರು. ತಮ್ಮ ಸಾಧನೆಯಿಂದ, ಮಾನವೀಯ ಮೌಲ್ಯಗಳಿಂದ ಇಡೀ ವಿಶ್ವವನ್ನೇ ಬೆರಗುಗೊಳಿಸಿದ ಮಹಾ ಮೇಧಾವಿಗಳು. ಅವರ ಸಂದೇಶಗಳು ದೇಶವನ್ನು ಪ್ರಗತಿ ಪಥದತ್ತ ಕೊಂಡೊತ್ಯುತ್ತವೆ. ವಿದ್ಯಾರ್ಥಿಗಳು ಅವುಗಳನ್ನು ಓದಬೇಕು, ಅವರ ಜೀವನ ಸಾಧನೆಯನ್ನು ತಿಳಿದುಕೊಳ್ಳಬೇಕು. ಜ್ಞಾನ ದೇಗುಲಕ್ಕೆ ತಮ್ಮ ಜೀವನವನ್ನು ಧಾರೆಯೆರೆದು ಇಂದಿಗೂ ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ಶ್ರಮಿಸುತ್ತಿರುವದು ಶ್ಲಾಘನೀಯವಾದುದು ಎಂದು ಪ್ರೊ. ದಯಾನಂದ ಅಗಸರ ಉಪಕುಲಪತಿಗಳು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಅವರು ತಿಳಿಸಿದರು.
ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ, ಸರ್ವಜ್ಞ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಮತ್ತು ಸರ್ವಜ್ಞ ಚಿಣ್ಣರ ಲೋಕ ಇವರ ಸಂಯುಕ್ತಾಶ್ರಯದಲ್ಲಿ “ಸ್ವಾಮಿ ವಿವೇಕಾನಂದರ 162ನೇ ಜನ್ಮ ದಿನಾಚರಣೆ ಮತ್ತು ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲರ 85ನೇ ಜನ್ಮ ದಿನಾಚರಣೆ” ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ,
ಇಂದಿನ ಯುವ ಜನಾಂಗಕ್ಕೆ ನೈತಿಕ ಶಿಕ್ಷಣ ಬಹಳ ಅವಶ್ಯಕವಾಗಿದೆ. ನೈತಿಕತೆಯಿಂದ ಮಾನವೀಯ ಮೌಲ್ಯಗಳಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮೂಡುತ್ತದೆ. ಸಂಸ್ಕಾರಯುತ ಪರಿಸರದಲ್ಲಿ ಶಿಕ್ಷಣ ದೊರಕಿದರೆ ಆ ವಿದ್ಯಾರ್ಥಿಗಳೇ ಸುಭದ್ರವಾದ ದೇಶವನ್ನು ಕಟ್ಟಬಹುದು. ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರ ಮಾರ್ಗದರ್ಶನದಲ್ಲಿ ಸರ್ವಜ್ಞ ಸಂಸ್ಥೆಯಲ್ಲಿ ನೈತಿಕ ಮೌಲ್ಯಯುತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಶಿಕ್ಷಣ ಕೇವಲ ಸರ್ಟಿಫಿಕೇಟ್‍ಗಾಗಿ ಪಡೆಯದೆ ಸಂಸ್ಕಾರಕ್ಕಾಗಿ ಪಡೆದಾಗ ಜೀವನ ಸಾರ್ಥಕವಾಗುತ್ತದೆ. ಶಿಕ್ಷಣದಿಂದ ನಮ್ಮ ಹಸಿವು ನೀಗಿಸಬಹುದು. ಮನುಷ್ಯತ್ವ ಗಳಿಸಬಹುದು. ದೇಶ ಪ್ರಗತಿ ಸಾಧಿಸಬಹುದು. ಸಾಧಿಸುವ ವ್ಯಕ್ತಿಗೆ ಸಮಸ್ಯೆಗಳು ಅಡ್ಡಿಯಾಗುವದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಜೀವನದಲ್ಲಿ ಸಾಧನೆ ಮಾಡಲು ಬೇಕಾದ ಅದ್ಭುತ ಸಾಮಥ್ರ್ಯವಿರುತ್ತದೆ. ಏನೂ ಬೇಕಾದರೂ ಸಾಧಿಸಬಹುದು. ತಮ್ಮಲ್ಲಿನ ಜ್ಞಾನ, ಬುದ್ಧಿ, ಸಾಮಥ್ರ್ಯ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಾಧನೆಯ ಹಾದಿಯಲ್ಲಿ ಮುಂದೆ ಸಾಗಬೇಕು. ಸಾಧನೆಗೆ ಪೂರಕವಾದ ಪರಿಸರವನ್ನು ನಿರ್ಮಿಸಿಕೊಳ್ಳಬೇಕು. ಶೈಕ್ಷಣಿಕ ಪರಿಸರ ಉತ್ತಮವಾಗಿದ್ದರೆ, ಮಕ್ಕಳ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಅದಕ್ಕೆ ಪರಿಸರದ ಪ್ರಜ್ಞೆ ಹೊಂದಿರುವದು ಅವಶ್ಯಕವಾಗಿದೆ. ಪರಿಸರ ಹಾಳುಮಾಡದೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಮಾಡಿಕೊಳ್ಳಬೇಕು. ಶಿಕ್ಷಕರಾದವರು ಸ್ವಾಮಿ ವಿವೇಕಾನಂದ, ಜಸ್ಟಿಸ್ ಶಿವರಾಜ ಪಾಟೀಲ ಅವರ ನುಡಿಗಳ ಸಂದೇಶವನ್ನು ಜೀವನ ಸಾಧನೆಯನ್ನು ವಿದ್ಯಾರ್ಥಿಗಳ ಮನಮುಟ್ಟುವಂತೆ ಅವರ ಬೌದ್ಧಿಕ ಸಾಮಥ್ರ್ಯಕ್ಕೆ ತಕ್ಕಂತೆ ತಿಳಿಸಿದಾಗ ಪ್ರತಿ ವಿದ್ಯಾರ್ಥಿಯೂ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ. ಶಿಕ್ಷಕರ ಕರ್ತವ್ಯ ಕಾರ್ಯನಿಷ್ಠೆ, ಪ್ರಾಮಾಣಿಕತೆ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಶಿಕ್ಷಕರನ್ನು ವಿದ್ಯಾರ್ಥಿಗಳು ಗೌರವದಿಂದ ಸ್ಮರಿಸಿಕೊಳ್ಳುವಂತೆ ಶಿಕ್ಷಕ ಕಾರ್ಯ ನಿರ್ವಹಿಸಿ ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಬೇಕು. ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ಅನುಕೂಲ ಒದಗಿಸಿಕೊಡಬೇಕೆಂದು ತಿಳಿಸಿದರು. ಸರ್ವಜ್ಞ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳೊಂದಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ಈ ನಾಡಿನ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿರುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ರಂಜಾನ್ ದರ್ಗಾ ಹಿರಿಯ ಸಾಹಿತಿಗಳು ಮತ್ತು ಸಂಸ್ಕøತಿ ಚಿಂತಕರು, ಅವರು ಮಾತನಾಡುತ್ತ, “ಸ್ವಾಮಿ ವಿವೇಕಾನಂದ ಅವರು ವಿಶ್ವಮಾನವ. ಇಡೀ ಜಗತ್ತಿಗೆ ಭಾರತದ ಘನತೆಯನ್ನು ಎತ್ತಿ ತೋರಿಸಿದವರು. ಅವರಿಗೆ ಸಮಾಜದ ಬಗ್ಗೆ ಕಳಕಳಿಯಿತ್ತು. ಸಮಾಜದ ಏಳಿಗೆಗಾಗಿ ಶ್ರಮಿಸಿದರು. ಹಿಂದುಳಿದವರ, ಅಸ್ಪøಶ್ಯರ, ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರ ಗುರುಗಳು ರಾಮಕೃಷ್ಣ ಪರಮಹಂಸರು. ಅವರ ಮಾರ್ಗದರ್ಶನದಂತೆ ಅಧ್ಯಾತ್ಮಿಕ ಸಾಧನೆ ಮಾಡಿದರು. ಸಾಮಾಜಿಕ ಚಿಂತನೆ ಹೊಂದಿದರು. ವಿದ್ಯಾರ್ಥಿಗಳು ಅವರ ಸಾಧನೆಯನ್ನರಿತು ನಾವು ದೇಶಭಕ್ತಿ ಬೆಳೆಸಿಕೊಂಡು ಸಾಧನೆ ಮಾಡಲು ಪ್ರಯತ್ನಿಸಬೇಕೆಂದು ತಿಳಿಸಿದರು. ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರು ಗ್ರಾಮೀಣ ಭಾಗದಲ್ಲಿ ಹುಟ್ಟಿ ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನದಿಂದ, ಸಾಧಿಸುವ ಛಲದಿಂದ, ನಿಷ್ಠೆಯಿಂದ ದೇಶದ ಅತ್ಯುನ್ನತ ಹುದ್ದೆಯಾದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಎಲ್ಲರಿಗೂ ಕಾನೂನಿನ ಚೌಕಟ್ಟಿನಲ್ಲಿ ಸೂಕ್ತವಾದ ನ್ಯಾಯ ಒದಗಿಸಿ ಕೊಟ್ಟು ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳು ತಮ್ಮಲ್ಲಿ ಶಕ್ತಿ ಸಾಮಥ್ರ್ಯ ಪ್ರತಿಭೆಯಿಂದ ಕಷ್ಟಗಳನ್ನು ಮೆಟ್ಟಿನಿಂತು ಉನ್ನತ ಚಿಂತನೆಗಳಿಂದು ಮೇಲೇರಿ ಸಾಧನೆ ಮಾಡಬೇಕೆಂದು ಪ್ರೇರೇಪಿಸಿದರು.

ಸ್ವಾಮಿ ವಿವೇಕಾನಂದ ಅವರು 1893 ರಲ್ಲಿ ಅಮೇರಿಕಾದ ಚಿಕಾಗೊ ನಗರದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಇಡೀ ಜಗತ್ತಿಗೆ ಮಾರ್ಗದರ್ಶಿಯಾಗಿದೆ. ನನ್ನ ಆತ್ಮೀಯ ಸಹೋದರ, ಸಹೋದರಿಯರೆ ಎಂಬ ಅವರ ಪದಗಳು ಇಡೀ ಸಭೆಯಲ್ಲಿ ಸಂಚಲನ ಮೂಡಿಸಿ ಎಲ್ಲರನ್ನೂ ಆಕರ್ಷಿಸಿದವು. ಬುದ್ಧ, ಬಸವಣ್ಣ, ವಿವೇಕಾನಂದ, ಅಂಬೇಡ್ಕರ, ಜಸ್ಟಿಸ್ ಶಿವರಾಜ ಪಾಟೀಲರು ಸಮಾಜ ಹೇಗಿರಬೇಕೆಂದು ಬಯಸಿದರು. ಅವರ ತತ್ವ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಂತಹ ಸಮೃದ್ಧ ದೇಶ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ತಿಳಿದುಕೊಂಡು ಅಳವಡಿಸಿಕೊಂಡು ಭವ್ಯ ಭಾರತದ ಸತ್ಪ್ರಜೆಯಾಗಿ ಬಾಳಬೇಕೆಂದು ಪ್ರೋತ್ಸಾಹಿಸಿದರು. ಸರ್ವಜ್ಞ ಶಿಕ್ಷಣ ಸಂಸ್ಥೆ “ವಿದ್ಯಾರ್ಥಿ ದೇವೋಭವ” ಎಂದು ಮಕ್ಕಳಲ್ಲಿ ದೈವೀ ಸ್ವರೂಪವನ್ನು ಕಂಡು ಅವರಿಗೆ ಸೂಕ್ತವಾದ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾದ ಶ್ರೀಮತಿ ಇಂದುಮತಿ ಸಾಲಿಮಠ ಖ್ಯಾತ ಪ್ರವಚನಕಾರರು, ಹಾಸ್ಯ ಕಲಾವಿದರು ವಾಗ್ಮಿಗಳು ಅವರು ಮಾತನಾಡುತ್ತ, ಹಾಸ್ಯದೊಂದಿಗೆ ನೈತಿಕ ಮೌಲ್ಯಗಳನ್ನು ತಿಳಿಸಿದರು. ವಿದ್ಯಾರ್ಥಿಗಳು ಜಾತಿ, ಮತ, ಪಂಥ, ಧರ್ಮಕ್ಕೆ ಅಂಟಿಕೊಳ್ಳದೆ ನಾನು ಭಾರತೀಯನೆಂಬ ಹೆಮ್ಮೆಯಿಂದಿದ್ದು, ಎಲ್ಲ ಭಾಷೆಯನ್ನು ಕಲಿಯುವುದರೊಂದಿಗೆ ಮಾತೃಭಾಷೆಯನ್ನು ಬೆಳೆಸಬೇಕು. ನಮ್ಮ ನಡೆ-ನುಡಿ, ಆಚಾರ, ವಿಚಾರ ಉತ್ತಮವಾಗಿದ್ದರೆ ಇದ್ದಲ್ಲಿಯೇ ಸ್ವರ್ಗ ಇರುತ್ತದೆ. ದುಶ್ಚಟಗಳಿಗೆ ಬಲಿಯಾಗದೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಸಾಹಿತ್ಯವನ್ನು ಓದಿಕೊಂಡು, ಸಜ್ಜನರ ಸಹವಾಸದಲ್ಲಿದ್ದು, ನೇತ್ರದಾನ, ರಕ್ತದಾನ, ದೇಹದಾನದ ಮಹತ್ವವನ್ನು ಸಮಾಜಕ್ಕೆ ತಿಳಿಸುತ್ತ, ಉತ್ತಮ ನಾಗರಿಕರಾಗಿ ಬಾಳಬೇಕೆಂದು ತಿಳಿಸಿದರು.

ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಮಾತನಾಡುತ್ತ, ಸ್ವಾಮಿ ವಿವೇಕಾನಂದ ಅವರು ಭಾರತ ದೇಶದ ಬಹುದೊಡ್ಡ ಸಂತರೂ, ಅಧ್ಯಾತ್ಮ ಸಾಧಕರು, ಭಾರತದ ಅತ್ಯಂತ ಪ್ರಸಿದ್ಧ ತತ್ವಜ್ಞಾನಿ. ವಿದ್ಯಾರ್ಥಿಗಳು ಅವರ ತತ್ವ ಸಿದ್ಧಾಂತವನ್ನು ಜೀವನ ಸಾಧನೆಯನ್ನು ತಿಳಿದುಕೊಂಡು ಪ್ರೇರಣೆಗೊಂಡು ಜೀವನದಲ್ಲಿ ಸಾಧನೆ ಮಾಡಬೇಕು.
ನ್ಯಾಯಮೂರ್ತಿ ಡಾ. ಜಸ್ಟಿಸ್ ಶಿವರಾಜ ವಿ. ಪಾಟೀಲ ಅವರು ವಿದ್ಯಾರ್ಥಿ ಜೀವನದಲ್ಲಿ ಎಷ್ಟೋ ಕಷ್ಟಗಳು ಬಂದರೂ ಕಷ್ಟಗಳನ್ನು ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಾಧನೆ ಮಾಡಿ ನಮಗೆಲ್ಲ ಮಾರ್ಗದರ್ಶಕರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಹುಟ್ಟಿ ಕನ್ನಡ ಮಾಧ್ಯಮದಲ್ಲಿ ಕಲಿತು ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದರು. ಇಂದಿನ ಯುವ ಜನಾಂಗವೇ ದೇಶದ ಆಸ್ತಿ. ಶಿಕ್ಷಕರು ಮಕ್ಕಳಲ್ಲಿ ಸಂಸ್ಕಾರ, ನೈತಿಕತೆ, ಮಾನವೀಯತೆ ಬೆಳೆಸಬೇಕು. ಇಂದಿನ ಯುವ ಪೀಳಿಗೆ ಸಂಸ್ಕಾರದಿಂದ, ಮೌಲ್ಯಗಳ ಕೊರತೆಯಿಂದ ಕಷ್ಟ ದಾರಿಗೆ ಹೋಗುತ್ತಿರುವದು ವಿಷಾಧನೀಯವಾಗಿದೆ. ತಂದೆ-ತಾಯಿಯನ್ನು ಗೌರವಿಸುವದು. ಅವರ ಸೇವೇ ಮಾಡುವದು ಉಪಕಾರವಲ್ಲ ಅದೊಂದು ಅಮೂಲ್ಯ ಅವಕಾಶ ಎಂದು ತಿಳಿದು ಪಾಲಕರಿಗೆ ಕೀರ್ತಿ ಬರುವಂತೆ ನಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಎಸ್.ಎಂ. ರೆಡ್ಡಿ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಮತ್ತು ಅಧ್ಯಕ್ಷರು ಜಸ್ಟಿಸ್ ಶಿವರಾಜ ಪಾಟೀಲ ಫೌಂಡೇಶನ್, ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಗೀತಾ ಚನ್ನಾರಡ್ಡಿ ಪಾಟೀಲ, ಸಂಸ್ಥೆಯ ಮುಖ್ಯ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಅಭಿಷೇಕ್ ಚನ್ನಾರಡ್ಡಿ ಪಾಟೀಲ, ಸರ್ವಜ್ಞ ಚಿಣ್ಣರ ಲೋಕದ ಶೈಕ್ಷಣಿಕ ನಿರ್ದೇಶಕರಾದ ಶ್ರೀಮತಿ ಸಂಗೀತಾ ಅಭಿಷೇಕ್ ಪಾಟೀಲ, ಪ್ರಾಚಾರ್ಯರಾದ ಶ್ರೀ ಎಂ.ಸಿ.ಕಿರೇದಳ್ಳಿ, ಶ್ರೀ ಪ್ರಭುಗೌಡ ಸಿದ್ಧಾರೆಡ್ಡಿ, ಶ್ರೀಮತಿ ವಿನುತಾ ಆರ್.ಬಿ., ಶ್ರೀ ಪ್ರಶಾಂತ ಕುಲಕರ್ಣಿ, ಶ್ರೀ ವಿಜಯ ನಾಲವಾರ, ಶ್ರೀ ಕರುಣೇಶ್ ಹಿರೇಮಠ, ಶ್ರೀ ಗುರುರಾಜ ಕುಲಕರ್ಣಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು.