ಸ್ವಾಮಿ ವಿವೇಕಾನಂದ ಪ್ರತಿಮೆ ಮೋದಿ ಅನಾವರಣ

ನವದೆಹಲಿ, ನ. ೧೨- ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ಸ್ವಾಮಿ ವಿವೇಕಾನಂದ ಅವರ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಅನಾವರಣ ಗೊಳಿಸಲಿದ್ದಾರೆ.
ಇಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಸ್ವಾಮಿ ವಿವೇಕಾನಂದ ಅವರ ಆಳೆತ್ತರದ ಪ್ರತಿಮೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣ ಮಾಡಲಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಪತಿ ಎಂ ಜಗದೀಶ್ ಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಾದನಂತರ ಸಭಾಕಾರ್ಯಕ್ರಮ ನಡೆಯಲಿದ್ದು ಪ್ರಧಾನಮಂತ್ರಿಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಭಾರತಮಾತೆಯ ಸುಪುತ್ರರು ಪ್ರತಿಭಾನ್ವಿತರು ಹಾಗೂ ಆಧ್ಯಾತ್ಮಿಕ ನಾಯಕರಲ್ಲಿ ಅತ್ಯಂತ ಪ್ರಭಾವ ಉಳ್ಳ ನಾಯಕರಾಗಿ ಸ್ವಾಮಿ ವಿವೇಕಾನಂದ ಅವರು ಹೊರಹೊಮ್ಮಿದ್ದಾರೆ. ಭಾರತದಲ್ಲಿ ಶಾಂತಿ ಸೌಹಾರ್ದತೆ ಅಭಿವೃದ್ಧಿ ಮತ್ತು ಸ್ವಾತಂತ್ರ್ಯದ ಹೋರಾಟದ ಸಂದೇಶವನ್ನು ಯುವಕರಿಗೆ ನೀಡುವ ಮೂಲಕ ಅವರಲ್ಲಿ ಹೊಸ ಚೈತನ್ಯವನ್ನು ಮೂಡಿಸಿದ್ದಾರೆ ಎಂದು ಕುಲಪತಿಯವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇದೇ ಸಂದರ್ಭದಲ್ಲಿ ಗುಜರಾತ್ ಮತ್ತು ರಾಜಸ್ಥಾನ ದಲ್ಲಿ ನೂತನವಾಗಿ ನಿರ್ಮಿಸಿರುವ ಆಯುರ್ವೇದ ಸಂಸ್ಥೆಗಳನ್ನು ಉದ್ಘಾಟಿಸಲಿದ್ದಾರೆ. ಗುಜರಾತ್ ರಾಜ್ಯದ ಜಾಮ್ನಗರ್ ನಲ್ಲಿ ನೂತನವಾಗಿ ಸ್ಥಾಪಿಸಿರುವ ಆಯುರ್ವೇದ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ರಾಜಸ್ಥಾನದ ಜೈಪುರದಲ್ಲಿ ಸ್ಥಾಪಿಸಲಾಗಿರುವ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಪ್ರಧಾನಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಲಿದ್ದಾರೆ ಎಂದು ಪ್ರಧಾನಮಂತ್ರಿಯವರ ಕಾರ್ಯಾಲಯ ತಿಳಿಸಿದೆ. ಕೋವಿಡ್ ೧೯ರ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅದನ್ನು ನಿಯಂತ್ರಿಸಲು ಆಯುರ್ವೇದ ಚಿಕಿತ್ಸಾ ಪದ್ಧತಿ ಪ್ರಮುಖ ಪಾತ್ರವಹಿಸಲಿದೆ ಎಂದು ಪ್ರಧಾನಿಯವರು ಈಗಾಗಲೇ ಹೇಳಿದ್ದಾರೆ.
೨೦೧೬ರ ನವೆಂಬರ್ ೧೩ರಂದು ಆಯುರ್ವೇದ ದಿನವನ್ನಾಗಿ ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಧನ್ವಂತರಿ ಜಯಂತಿ ಅಂಗವಾಗಿ ಆಯುರ್ವೇದ ದಿನವನ್ನಾಗಿ ಆಚರಿಸಲಾಗುತ್ತಿದೆ.