ಸ್ವಾಮಿ ವಿವೇಕಾನಂದ ಜಯಂತಿಯಂಗವಾಗಿ ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ

ಕಲಬುರಗಿ:ಜ.15: ನಗರದ ಆದರ್ಶನಗರದ ಕೆ2 ಗ್ರಂಥಾಲಯದ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿಯನ್ನು `ಮಗುವಿಗೊಂದು ಮನೆಯಲ್ಲಿಯೇ ಗ್ರಂಥಾಲಯ ಹಾಗೂ ಕಾಲೋನಿಯ ಸ್ವಚ್ಛತಾ ಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮ’ ನಡೆಸುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಕಾರ್ಯದರ್ಶಿ ಸೋಮಶೇಖರ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಯೊಬ್ಬರೂ ಓದುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕೆಂಬ ಹಿನ್ನಲೆಯಲ್ಲಿ, ಬಡಾವಣೆಯ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಸಂಯೋಜಕರಾದ ಕೃಷ್ಣ ಶಿವಮೂರ್ತಿ ಅವರ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ, ಯಾದಗಿರಿ, ಬೀದರ ಕೆ.ಎಂ.ಎಫ್ ನಿರ್ದೇಶಕ ಸಂತೋಷ ಗುತ್ತೇದಾರ್ ಮಾತನಾಡಿ, ಮೊಬೈಲ್‍ನ ಹಾವಳಿಯಿಂದ ಇತ್ತಿಚೆಗೆ ಎಲ್ಲಾ ವಯೋಮಾನದವರು ಓದುವುದನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಮನೆಯಲ್ಲೂ ಒಂದು ಪುಟ್ಟ ಗ್ರಂಥಾಲಯ ಸ್ಥಾಪನೆ ಮಾಡುವುದರಿಂದ ಪುಸ್ತಕಗಳನ್ನು ಸಂಗ್ರಹಿಸಬೇಕು, ಅವುಗಳನ್ನು ಓದಬೇಕು ಎಂಬ ಭಾವನೆ ಬರುತ್ತದೆ ಎಂಬ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ಇಂತಹ ಜಾಗೃತಿ ಕಾರ್ಯಗಳು ಹೆಚ್ಚು ಹೆಚ್ಚಾಗಿ ನಡೆಯಬೇಕೆಂದರು.
ಕಾರ್ಯಕ್ರಮದ ಸಂಯೋಜಕ ಕೃಷ್ಣ ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಮಿ ವಿವೇಕಾನಂದರ ಕನಸಿನ ಭಾರತ ನಿರ್ಮಾಣ ಯುವಕರ ಕೈಯಲ್ಲಿದೆ. ಅವರಿಗೆ ಪಾಲಕರು ಪೆÇ್ರೀತ್ಸಾಹಿಸಬೇಕು. ರಾಷ್ಟ್ರ ಪ್ರೇಮ, ಆತ್ಮವಿಶ್ವಾಸ ತುಂಬುವ ಮೂಲಕ ಅವರನ್ನು ಮುನ್ನಡೆಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಮಂಜುನಾಥ ಕಳಸ್ಕರ್, ಬಸವರಾಜ ಬೂಸನೂರು ಆಗಮಿಸಿದ್ದರು. ವಿದ್ಯಾರ್ಥಿಗಳಾದ ಭಾಗವಂತಿ, ಭಾಗ್ಯಶ್ರೀ, ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸಂಜನಾ ರಂಗದಾಳ ವಂದಿಸಿದರು. ಇದೇ ಸಂದರ್ಭದಲ್ಲಿ ಕಾಲೋನಿಯ ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.