ಸ್ವಾಮಿ ವಿವೇಕಾನಂದರ ೧೬೧ ಜಯಂತಿ ಆಚರಣೆ

ರಾಯಚೂರು.ಜ.೧೨- ನಗರದ ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಹಾಗೂ ಸ್ವಾಮಿ ವಿವೇಕಾನಂದ ಪುತ್ತಳಿ ಪ್ರತಿಷ್ಠಾಪನ ಸಮಿತಿ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಸ್ವಾಮಿ ವಿವೇಕಾನಂದ ಸರ್ಕಲ್ ಹತ್ತಿರ ರಾಷ್ಟ್ರ ಸಂತ ವೀರಸನ್ಯಾಸಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಸೋಮವಾರಪೇಟೆ ಹಿರೇಮಠದ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಗೌರವ ನಮನ ಸಲ್ಲಿಸಿ ಸ್ವಾಮೀಜಿಗಳು ಮಾತನಾಡಿ ಸ್ವಾಮಿ ವಿವೇಕಾನಂದರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ನಗರಸಭೆ ಸದಸ್ಯ ಶಶಿರಾಜ್ ಮಾತನಾಡಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯನ್ನು ಪ್ರತಿ ವರ್ಷ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಪುತ್ತಳಿ ಪ್ರತಿಷ್ಠಾನ ಸಮಿತಿ ಸಂಚಾಲಕ ವಿಜಯಭಾಸ್ಕರ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿವೇಕಾನಂದರ ಆಶಯದಂತೆ ಯುವಜನಾಂಗ ದೇಶದ ಪ್ರಗತಿಗೆ ಪೂರಕವಾಗಿ ಬೆಳೆಯಬೇಕೆಂದು ಕರೆ ನೀಡಿದರು. ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟಿನ ಗೌರವ ಕಾರ್ಯದರ್ಶಿಗಳಾದ ಜೆ.ಎಂ.ವೀರೇಶ್ ಕುಮಾರ್ ಮಾತನಾಡಿ ಸ್ವಾಮಿ ವಿವೇಕಾನಂದರ ಕೊನೆಯ ಮೂರು ಭವಿಷ್ಯವಾಣಿ ಗಳಲ್ಲಿ ಎರಡು ನಿಜವಾಗಿದ್ದು ಕೊನೆಯ ಭವಿಷ್ಯವಾಣಿ ಯಾದ ಭಾರತ ವಿಶ್ವಗುರು ಆಗುವಲ್ಲಿ ದೇಶದ ಪ್ರತಿಯೊಬ್ಬರೂ ಶ್ರಮಿಸುವ ಸಂಕಲ್ಪ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಕಡಗೋಳ್ ಆಂಜನೇಯ, ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ರಮೇಶ್ ಕುಲಕರ್ಣಿ ಮುಖಂಡರುಗಳಾದ ವಾಸು ಲಕ್ಷ್ಮಿಕಾಂತ್, ವಿ.ರಘು ರೆಡ್ಡಿ, ಬಂಗಿ ಮುನಿರೆಡ್ಡಿ, ಜಯ ಕುಮಾರ್,ರಾಮಚಂದ್ರ ನಾಯಕ ಜೆ.ಎಂ.ಮೌನೇಶ್, ವಿಷ್ಣುವರ್ಧನ್ ರೆಡ್ಡಿ, ಸಣ್ಣ ಈರಣ್ಣ ಸೇರಿದಂತೆ ಅನೇಕ ಯುವಕರು ಭಾಗವಹಿಸಿ ಯಶಸ್ವಿಗೊಳಿಸಿದರು.