
ಇಂಡಿ:ಮಾ.16:ಜಗತ್ತನ್ನು ಶಕ್ತಿಯುತ, ಸಶಕ್ತ, ಸರ್ವಶಕ್ತ ಮಾಡಲು ವಿವೇಕಾನಂದ ಉಪನಿಷತ್ತುಗಳು ಮತ್ತು ಸಾಹಿತ್ಯಗಳ ಅವಶ್ಯಕತೆ ಇದೆ. ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ ಎಂದು ತನ್ನ ಸಾಹಿತ್ಯದ ಮೂಲಕ ಯುವಕರನ್ನು ಪ್ರೇರೆಪಿಸಿದ ವ್ಯಕ್ತಿಯನ್ನು ಶಕ್ತಿಯಾಗಿಸಿದ ಸ್ವಾಮಿ ವಿವೇಕಾನಂದರ ಸಾಹಿತ್ಯದ ಅವಶ್ಯಕತೆ ನಮ್ಮ ಯುವಕರಿಗೆ ಇದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ನೂತನ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಗದಗದ ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ ಸ್ವಾಮಿ ವಿವೇಕಾನಂದ ಸಾಹಿತ್ಯ ಓದಿನ ಮೇಲೆ ನಾನು ಪರಿವರ್ತನೆ ಯಾಗಿದ್ದೇನೆ.ಅವರ ಸಾಹಿತ್ಯದಿಂದ ಆತ್ಮ ಭಾವ ಬೆಳೆಯುತ್ತದೆ ಎಂದು ಹೇಳಿದ ಅವರು ಸ್ವಾಮಿ ವಿವೇಕಾನಂದರು ಪ್ರೀತಿಯಿಂದ ಮಾತ್ರ ದೇಶ ಕಟ್ಟಬಹುದು ಎಂದಿದ್ದಾರೆ. ಅದನ್ನು ಯುವಶಕ್ತಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಕಾತ್ರಾಳದ ಅಮೃತಾನಂದ ಶ್ರೀಗಳು ಮಾತನಾಡಿ ಸ್ವಾಮಿ ವಿವೇಕಾನಂದರ ಜ್ಞಾನ ಮತ್ತು ದೇಶಪ್ರೇಮ ಕಂಡು ಬೆರಗಾಗಿದ್ದಲ್ಲದೆ ನನಗೆ ನೂರು ಪಟ್ಟು ದೇಶ ಪ್ರೇಮ ಹೆಚ್ಚಿಸಿತು ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದಾರೆ. ಪಾಶ್ಚಾತ್ಯರನ್ನು ಬದಲಾಯಿಸುವ ಶಕ್ತಿ ಸ್ವಾಮಿ ವಿವೇಕಾನಂದರಲ್ಲಿ ಇತ್ತು . ಭಾರತ ಜ್ಞಾನದ ಖಣಿ ಎಂದು ತೋರಿಸಿಕೊಟ್ಟವರೇ ಸ್ವಾಮಿ ವಿವೇಕಾನಂದ ಎಂದರು.