ಸ್ವಾಮಿ ವಿವೇಕಾನಂದರ ತತ್ವಗಳು ಎಂದೆಂದಿಗೂ ಸಾರ್ವಕಾಲಿಕ : ದಸ್ತಿ

ಕಲಬುರಗಿ:ಜ.12: ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳು ಎಂದೆಂದಿಗೂ ಸಾರ್ವಕಾಲಿಕ.ಅಧ್ಯತ್ಮದ ತಳಹದಿ ಮೇಲೆ ದೇಶಾಭಿಮಾನಿಯಾಗಿ ಯುವಕರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಿದರು ಎಂದು ಹಿರಿಯ ಹೋರಾಗಾರರಾದ ಲಕ್ಷ್ಮಣ ದಸ್ತಿ ತಿಳಿಸಿದರು.

ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಎಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂಬ ಘಂಟ ಘೋಷ ದೊಂದಿಗೆ ಯುವಕರನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದ ಅವರು ವಿದ್ಯಾರ್ಥಿಗಳಲ್ಲಿ ಶೃದ್ಧೆ,ಸತತ ಪ್ರಯತ್ನ, ಅಭ್ಯಾಸದಿಂದ ಅಸಾಧ್ಯ ವಾದದ್ದು ಸಾಧ್ಯವಾಗುತ್ತದೆ ಎಂದು ತಿಳಿಹೇಳುತ್ತಿದ್ದರು ಎಂದರು.

ಅವರಲ್ಲಿದ್ದ ದೇಶಾಭಿಮಾನ ಮೆಚ್ಚುವಂಥದ್ದು.ದೇಶಾದ್ಯಂತ ಬರಿ ಕಾಲಲ್ಲಿ ಸಂಚರಿಸಿ ದೇಶದ ಸ್ಥಿತಿ ಗತಿಯ ಬಗ್ಗೆ ಅಧ್ಯಯನ ಮಾಡಿದರು.ಕೃಷಿಕರು ಮತ್ತು ಯುವಕರಿಗೆ ಮಾರ್ಗದರ್ಶನ ನೀಡಿದ್ದ ಅವರು ಕೃಷಿಯನ್ನು ಒಂದು ಉದ್ಯಮವನ್ನಾಗಿ ಪರಿಗಣಿಸಿ ಎಂದು ಪ್ರತಿಪಾದಿಸಿದ್ದರು.ಇಂದಿನ ಯುವಕರು ವಿವೇಕಾನಂದರ ಉಪದೇಶ ಪಾಲಿಸಬೇಕು ಎಂದರು.ಇಷ್ಷೇ ಅಲ್ಲದೆ ವಿದೇಶಗಳಲ್ಲೂ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳಿಗೆ ಇಂದಿಗೂ ಮನ್ನಣೆ ಇದೆ.ಅಮೇರಿಕದಂಥ ಮುಂದುವರಿದ ರಾಷ್ಟ್ರಗಳಲ್ಲಿ ಅವರ ತತ್ವ ಆದರ್ಶಗಳ ಬಗ್ಗೆ ಚರ್ಚೆ, ಚಿಂತನೆ ನಡೆದಿದೆ ಎಂದರು.

ಹಿರಿಯ ಚಿಂತಕ ಡಾ. ಬಸವರಾಜ ಕುಮ್ಮನೂರ,ಹೋರಾಟಗಾರ ಲಿಂಗರಾಜ ಸಿರಗಾಪೂರ, ಆದಿನಾಥ ಹೀರಾ, ಎ.ಎಸ್.ಭದ್ರಶೆಟ್ಟಿ, ವಿರೇಶ ಪುರಾಣಿಕ, ಜ್ಞಾನಮಿತ್ರ,ಎಚ್. ಎಂ.ಹಾಜಿ ಸೇರಿದಂತೆ ಅನೇಕರು ಇದ್ದರು.