
ಕೆಂಭಾವಿ:ಜ.13:ಸ್ವಾಮಿ ವಿವೇಕಾನಂದರು ಶಿಕಗೋ ಸಮ್ಮೇಳನದಲ್ಲಿ ಮಾಡಿದ ಉಪನ್ಯಾಸ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುದಿಗೌಡ ಮಾಲಿಪಾಟೀಲ ಹೇಳಿದರು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ (ರಾಷ್ಟ್ರೀಯ ಯುವ ದಿನಾಚರಣೆ) ಹಾಗೂ ಸಂಘದ ಮೂರನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತವನ್ನು ಅರ್ಥೈಸಿಕೊಳ್ಳಬೇಕೆಂದರೆ ವಿವೇಕಾನಂದರ ಬಗ್ಗೆ ಓದಿ ಎಂದು ಮಹಾತ್ಮಾ ಗಾಂಧಿ ಹೇಳಿದ್ದರು. ವಿವೇಕಾನಂದರ ಬಗ್ಗೆ ಓದಿದಾಗ ತಮ್ಮಲ್ಲಿ ರಾಷ್ಟ್ರೀಯತೆ ಭಾವ ಹೆಚ್ಚಾಯಿತು ಎಂದು ಗಾಂಧಿಜಿ ಉಲ್ಲೇಖಿಸಿದ್ದಾರೆ. ವಿವೇಕಾನಂದರು ಅಪಾರ ಪಾಂಡಿತ್ಯ ಹೊಂದಿದ್ದರು. ವೇದ್, ಉಪನಿಷತ್, ರಾಮಾಯಣ, ಮಹಾಭಾರತ ಸೇರಿದಂತೆ ಅನೇಕ ವಿಷಯಗಳನ್ನು ವಿಸ್ತ್ರತವಾಗಿ ತಿಳಿದುಕೊಂಡಿದ್ದರು. ಇಂದಿನ ಯುವಕರಿಗೆ ಅವರ ಆದರ್ಶಗಳು ಮಾದರಿ ಎಂದು ತಿಳಿಸಿದರು.
ನಮ್ಮ ಸಂಘವು ಮೂರು ವರ್ಷದಲ್ಲಿ ಅನೇಕ ರೈತರಿಗೆ ಸಾಲವನ್ನು ಮಂಜೂರ ಮಾಡಿದೆ. ಪ್ರತಿವರ್ಷ ಸರಕಾರದ ಬೆಂಬಲ ಬೆಲೆಯಡಿ ತೊಗರಿಯನ್ನು ಖರೀದಿಸಲಾಗುತ್ತಿದೆ. ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಸಾಲ ರೈತರಿಗೆ ದೊರೆಯುವಂತೆ ಮಾಡಲಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ, ನಿರ್ದೇಶಕರಾದ ಸಂಗಣ್ಣ ತುಂಬಗಿ, ರಫೀಕ ವಡಕೇರಿ, ಡಿ.ಸಿ.ಪಾಟೀಲ, ಭೀಮನಗೌಡ ಕಾಚಾಪುರ, ಮುಖಂಡರಾದ ಗುರುಮೂರ್ತಿ ಪತ್ತಾರ, ರಮೇಶ ಸೊನ್ನದ, ಶ್ರೀಶೈಲ್ ಆಲ್ದಾಳ, ನಂದಪ್ಪ ದೊರೆ, ಹಳ್ಳೆಪ್ಪ ಕವಾಲ್ದಾರ, ಕಾರ್ಯದರ್ಶಿ ಸತ್ಯರಾಜ ಮಾಳನೂರ, ಸುಗೂರಯ್ಯ ಇಂಡಿ, ಚಂದ್ರು ಕವಲ್ದಾರ, ನಿಂಗಪ್ಪ ಪತ್ತೇಪುರ ಸೇರಿದಂತೆ ಇತರರಿದ್ದರು.