ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ವಿವಿಧ ಕಾರ್ಯಕ್ರಮ

ಧಾರವಾಡ,ಜ21 : ನಗರದ ಜನಜಾಗೃತಿ ಸಂಘದ ವತಿಯಿಂದ ಜ. 23 ರಂದು ಸೋಮವಾರ ಸಂಜೆ 6 ಗಂಟೆಗೆ ದೊಡ್ಡನಾಯಕನಕೊಪ್ಪ ಬಡಾವಣೆಯ ಬೇಂದ್ರೆ ನಗರ ಕ್ರಾಸ್ ಮೈದಾನದಲ್ಲಿ ಸ್ವಾಮಿ ವಿವೇಕಾನಂದರ 160 ನೇ ಜಯಂತಿ ಹಾಗೂ ಸುಭಾಸಚಂದ್ರ ಭೋಸ್ ಅವರ 126 ನೇ ಜಯಂತ್ಯೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಾಗೂ ಜನಜಾಗೃತಿ ಸಂಘದ 15ಕ್ಕೂ ಹೆಚ್ಚು ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಸವರಾಜ ಕೊರವರ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ .ಮಾತನಾಡಿ ಈ ಕುರಿತು ವಿವರ ನೀಡಿದರು.
ಈ ಸಮಾರಂಭದ ಸಾನಿಧ್ಯವನ್ನು ಶಿರಹಟ್ಟಿಯ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಹ್ಯುಮನ್ ಮೈಂಡ್ ಸೆಟ್ ಕೋಚ್, ವಿಸ್ತಾರ ಝಿಂದಗಿ ಮುಖ್ಯಸ್ಥ ಮಹೇಶ ಮಾಶಾಳ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅತಿಥಿಗಳಾಗಿ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನಿ, ನರಸಿಂಹ ಜೋಶಿ ಆಗಮಿಸಲಿದ್ದಾರೆ.
ಇದರ ಅಧ್ಯಕ್ಷತೆಯನ್ನು ಕೆಸಿಡಿ ನಿವೃತ್ತ ಪ್ರಾಂಶುಪಾಲರಾದ ಡಾ. ಎಫ್. ಬಿ. ಚಾಕಲಬ್ಬಿ ವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜನಜಾಗೃತಿ ಸಂಘವು ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸೋಮಾಪುರ ಗ್ರಾಮದ ಪ್ರಗತಿಪರ ರೈತರಾದ ಸಿದ್ದಪ್ಪ ಮುತ್ತಗಿ, ಮಂಗಳಗಟ್ಟಿ ಗ್ರಾಮದ ಮಂಜುನಾಥ ಬಾಗಣ್ಣವರ, ಧಾರವಾಡದ ಮೃತ್ಯುಂಜಯ ವಸ್ತ್ರದ, ಖಾದಿ ಗ್ರಾಮೋದ್ಯೋಗ ಕ್ಷೇತ್ರದಲ್ಲಿ ರಾಷ್ಟ್ರಧ್ವಜ ತಯಾರಿಕೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಗರಗ ಗ್ರಾಮದ ಚನ್ನವ್ವ ಹೊನ್ನಣ್ಣವರ, ಸುಕನ್ಯಾ ಅರಶಿಣಕರ, ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ವಿಶಿಷ್ಟ ಬರಹದ ಮೂಲಕ ಗಮನ ಸೆಳೆದ ನರೇಂದ್ರ ಗ್ರಾಮದ ಅರವಿಂದ ದೇಶಮುಖ, ಕ್ರೀಡಾ ಕ್ಷೇತ್ರಕ್ಕೆ ನೂರಾರು ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಪೆÇಲೀಸ್ ಮಕ್ಕಳ ವಸತಿ ಶಾಲೆಯ ಪ್ರಮೋದ ರೋಣದ, ಜಾನಪದ ಕ್ಷೇತ್ರದಲ್ಲಿ ಜಿರಿಗವಾಡ ಗ್ರಾಮದ ಯಲ್ಲಪ್ಪ ಹೊರಕೇರಿ, ಲೋಕೂರು ಗ್ರಾಮದ ಕಲ್ಲಯ್ಯ ಹಿರೇಮಠ,
ಕೈಗಾರಿಕಾ ಕ್ಷೇತ್ರದಲ್ಲಿ ದಿನಪತ್ರಿಕೆ ಮರುಬಳಕೆ ಮೂಲಕ ಪೆನ್ಸಿಲ್ ತಯಾರಿಸುತ್ತಿರುವ ಅಪರ್ಣಾ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ವಿವರಿಸಿದರು.
ಇದಲ್ಲದೆ, ಮಕ್ಕಳು ಮತ್ತು ಮಹಿಳೆಯರಿಗೆ ಅವಸಾನದ ಅಂಚಿನಲ್ಲಿರುವ ದೇಸಿ ಕ್ರೀಡಾಕೂಟಗಳಾದ ಹಗ್ಗ ಜಗ್ಗಾಟ, ಗೋಣಿಚೀಲ ಓಟ, ಲಗೋರಿ, ಗಾಲಿ ಓಟ, ಮ್ಯೂಸಿಕಲ್ ಚೇರ್ ಸೇರಿದಂತೆ ಅನೇಕ ದೇಸಿ ಕ್ರೀಡಾಪಟುಗಳನ್ನು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿದೆ.
ಪುಟಾಣಿಗಳಿಗಾಗಿ ಛದ್ಮವೇಷ ಸ್ಪರ್ಧೆ, ಶಾಲಾ ಮಕ್ಕಳಿಗೆ ಪ್ರಬಂಧ, ಭಾಷಣ, ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ.
ಇದಾದ ಬಳಿಕ ಒತ್ತಡ ಮುಕ್ತ ಬದುಕಿಗಾಗಿ ಗಂಗಾವತಿ ಪ್ರಾಣೇಶ ಹಾಗೂ ಅವರ ತಂಡದ ಸದಸ್ಯರಾದ ಬಸವರಾಜ ಮಹಾಮನಿ, ನರಸಿಂಹ ಜೋಶಿ ಅವರಿಂದ ನಗೆಕೂಟ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.