ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಗಬ್ಬೂರು.ಜ.೧೩-ಭಾರತೀಯ ಧಾರ್ಮಿಕ ಪರಂಪರೆಯ ಸಾಕ್ಷಿಪ್ರತಿಜ್ಞೆಯಂತಿದ್ದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಜನತೆಗೆ ತಲುಪಿಸಿದರೆ ರಾಷ್ಟ್ರಪ್ರಜ್ಞೆ ಬೆಳಗಲಿದೆ ಎಂದು ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಹೀರೆಬೂದುರು ಪ್ರೌಢಶಾಲೆಯ ಹಿರಿಯ ಶಿಕ್ಷಕ ದೇವರಾಜ್ ತಿಳಿಸಿದರು.
ಶಾಲೆಯ ಆವರಣದಲ್ಲಿ ಗುರುವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಮಾತನಾಡಿದರು.
ವೀರಸನ್ಯಾಸಿ ವಿವೇಕಾನಂದ ಕಡಲಿನಾಚೆಯ ದೇಶಗಳಿಗೆ ತೆರಳಿ ಸನಾತನ ಧಾರ್ಮಿಕ ಭಾರತೀಯತೆಯನ್ನು ಪರಿಚಯಿಸಿದರು.ಹದಿ- ಹರೆಯದ ಯುವಕ-ಯುವತಿಯರಿಗೆ ಹೃದಯಮಂದಿರದಲ್ಲಿ ಶೌರ್ಯಧೈರ್ಯದ ಪರಿಕಲ್ಪನೆಯನ್ನು ತುಂಬಲು ದೇಶದಾದ್ಯಂತ ಸಂಚರಿಸಿದರು.ಆಧ್ಯಾತ್ಮಿಕ ಸಂತ ಶ್ರೀರಾಮಕೃಷ್ಣ ಪರಮಹಂಸರು ಮತ್ತು ಶಾರದಾ ಮಾತೆಯರ ಪದತಲದಲ್ಲಿ ದಕ್ಷಿಣೇಶ್ವರದಲ್ಲಿ ಬೆಳೆದರು.ಯುವಜನತೆಗೆ ವಿವೇಕಾನಂದರ ಜೀವನದ ಮಹತ್ವವನ್ನು ತಿಳಿಸಿಕೊಡುವ ಕೆಲಸ ಮಾಡಬೇಕಿದೆ ಎಂದರು.
ಪ್ರೌಢಶಾಲೆಯ ಮುಖ್ಯಶಿಕ್ಷಕ ಹಣಮಂತ ಕ್ವಾರಿ ಮಾತನಾಡಿ, ಅಸಮಾನತೆಯನ್ನು ಬೇರುಸಹಿತ ಕಿತ್ತೊಗೆಯಬೇಕು.ದೀನರ ಸೇವೆ ಮಾಡಬೇಕು.ಅರ್ಥವಿಲ್ಲದ ಸಂಪ್ರದಾಯಗಳನ್ನು ತ್ಯಜಿಸಬೇಕು.ವಿಶ್ವದ ಅಧ್ಯಾತ್ಮಿಕತೆಯ ಸಂಕೇತದಂತಿರುವ ಹಿಂದೂಧರ್ಮದಲ್ಲಿ ಸಹಬಾಳ್ವೆ, ಶಾಂತಿ ಸಂದೇಶಗಳನ್ನು ಎಲ್ಲರಿಗೂ ತಿಳಿಸುವುದೇ ನಾವು ವಿವೇಕಾನಂದರಿಗೆ ಸಲ್ಲಿಸುವ ಗೌರವವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವರ್ಗದವರು, ಹಳೆಯ ವಿದ್ಯಾರ್ಥಿಗಳಾದ ಹನುಮಂತರಾಯ ಹದ್ದಿನಾಳ,ಪ್ರಭು ಅಗ್ರಹಾರ ಉಪಸ್ಥಿತರಿದ್ದರು.