ಸ್ವಾಮಿ ವಿವೇಕಾನಂದರು ಪ್ರಪಂಚ ಕಂಡ ಮಹಾನ್ ತತ್ವಜ್ಞಾನಿ

ಕಲಬುರಗಿ:ಜ.12:ಸ್ವಾಮಿ ವಿವೇಕಾನಂದರು ಪ್ರಪಂಚ ಕಂಡ ಮಹಾನ್ ತತ್ವಜ್ಞಾನಿಗಳಲ್ಲೊಬ್ಬರು. ಎಲ್ಲ ಕಾಲದ ಯುವ ಜನಾಂಗಕ್ಕೆ ಸ್ಪೂರ್ತಿ ತುಂಬುವ ಧೀಮಂತ ಶಕ್ತಿ. ಅವರ ಸಂದೇಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಅವರನ್ನು ಹಿಂಬಾಲಿಸುತ್ತದೆ ಎಂದು ಸಿದ್ದಪ್ಪ ಭಗವತಿ ಹೇಳಿದರು.

ನಗರದ ರಾಮ ಮಂದಿರ ಸಮೀಪವಿರುವ ವಿವೇಕಾನಂದ ವಿದ್ಯಾ ನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ನಿಮಿತ್ತ, ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿದ್ದಪ್ಪ ಭಗವತಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ವಿವೇಕಾನಂದರ ತತ್ವಾದರ್ಶಗಳನ್ನು ಪ್ರತಿ ವಿದ್ಯಾರ್ಥಿಯೂ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಸನ್ಮಾರ್ಗದಲ್ಲಿ ನಡೆದರೆ ಸುಲಭವಾಗಿ ತಮ್ಮ ಗುರಿ ತಲುಪಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಮಕ್ಕಳಿಗೆ ನಿಬಂಧ, ಭಾಷಣ ಹಾಗೂ ವಿವೇಕಾನಂದರ ಸಂದೇಶಗಳನ್ನು ಹೇಳುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ವಿದ್ಯಾರ್ಥಿಗಳಾದ ಸೌಮ್ಯ, ಜೀವನ ಹಾಗೂ ಸುಬ್ರಮಣ್ಯ ವಿವೇಕಾನಂದರ ಜೀವನ ಹಾಗೂ ಸಾಧನೆಯ ಕುರಿತು ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಸುವರ್ಣ ಭಗವತಿ, ಶೈಕ್ಷಣಿಕ ನಿರ್ದೇಶಕ ಆರ್.ಎಂ.ಶಿಂದೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಅಂಬಿಕಾ ರೆಡ್ಡಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.