ಸ್ವಾಮಿ ವಿವೇಕಾನಂದರು ಎಲ್ಲ ನಾಗರಿಕರ ಮನಗೆದ್ದವರು: ಟಿಜಿಕೆ ಮೂರ್ತಿ

ಕಲಬುರಗಿ, ಜ.12- ವಯಸ್ಸು, ಲಿಂಗ, ಜಾತಿ, ರಾಷ್ಟ್ರೀಯತೆಯನ್ನು ಲೆಕ್ಕಿಸದೇ ಸ್ವಾಮಿ ವಿವೇಕಾನಂದರು ಎಲ್ಲ ನಾಗರಿಕರ ಮನ ಗೆದ್ದಿದ್ದಾರೆ ಎಂದು ಇಸ್ರೋ ಮಾಜಿ ಕಾರ್ಯಕ್ರಮ ನಿರ್ದೇಶಕ ಮತ್ತು ಸ್ಪೇಸ್ ಆಪ್ಟಿಕ್ ಪಿತಾಮಹ ಪ್ರೊ. ಟಿಜಿಕೆ ಮೂರ್ತಿ ಅವರು ಹೇಳಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂಧ್ರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಸಂದರ್ಭದಲ್ಲಿ ಆನ್‍ಲೈನ್‍ನಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಯೌವ್ವನದವರಾಗಿದ್ದರು ಮತ್ತು ಅವರು ದೇಶದ ಯೌವ್ವನದ ಸಂಕೇತವಾಗಿದ್ದಾರೆ. ಅದ್ದರಿಂದ ಅವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುವುದು ಸೂಕ್ತವಾಗಿದೆ ಎಂದರು.
ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸಿದ ಅವರು, ಯುವಕರಿಗೆ ಯಶಸ್ವಿಯಾಗಲು ನೀವು ವೇದಗಳಿಗೆ ಹೋಗಬೇಕಾಗಿಲ್ಲ. ಒಳ್ಳೆಯವರಾಗಿರಿ ಮತ್ತು ಒಳ್ಳೆಯದನ್ನು ಮಾಡಿ ಎಂದರು.
ಸ್ವಾಮಿ ವಿವೇಕಾನಂದರು ಯಾವಾಗಲೂ ಪ್ರಶ್ನಿಸುವುದನ್ನು ಪ್ರೋತ್ಸಾಹಿಸಿದರು. ನೀವು ಜೀವನದಲ್ಲಿ ಏನಾದರೂ ಆಗಲು ಬಯಸಿದರೆ ನೀವೇ ನಿಮ್ಮನ್ನು ಪ್ರಶ್ನಿಸಬೇಕು. ನೀವು ಕುರುಡಾಗಿ ಯಾವುದನ್ನೂ ಸ್ವೀಕರಿಸಬೇಡಿ. ಆದ್ದರಿಂದ ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ನೀವು ದೇವರನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದರು ಎಂದರು.
ರಾಷ್ಟ್ರದ ಕುರಿತು ಸ್ವಾಮಿ ವಿವೇಕಾನಂದರ ಆಲೋಚನೆಯ ಕುರಿತು ವಿವರಿಸಿದ ಅವರು, ತನಗೆ ಎರಡು ಪ್ರಶ್ನೆಗಳಿವೆ. ಒಂದು ಈ ಭಾರತವು ಇಂದು ಈ ರೀತಿ ಏಕೆ ಮಾರ್ಪಟ್ಟಿದೆ. (19ನೇ ಶತನಾನದ ಭಾರತ/ ಬಡ ಭಾರತ) ಮತ್ತು ಇನ್ನೊಂದು ಸಮಾಜವನ್ನು ಪರಿವರ್ತಿಸುವ ಅವಶ್ಯಕವೇ? ಹಾಗಾದರೆ ಯಾರಿಂದ ಭಾರತವನ್ನು ಹಿಂದಿನ ವೈಭವಕ್ಕೆ ಮರಳಿ ತರಬೇಕು ಎಂದು ಅವರು ಬಯಸಿದ್ದರು. ಭಾರತವನ್ನು ಪುನನಿರ್ಮಿಸಲು ಅವರು ಪಶ್ಚಿಮದ ಸಂಪತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ತರಲು ಹೇಳಿದರು. ಇದರೊಂದಿಗೆ ಭಾರತಕ್ಕೆ ಸಾಹಸ, ಧೈರ್ಯ, ಸಮರ್ಪಣೆ, ಶಕ್ತಿಯುತ ಮತ್ತು ನಿರ್ಭಯತೆ ಇರುವ ಯುವಕರ ಅಗತ್ಯವಿದೆ ಎಂದು ಅವರು ಹೇಳಿದರು.
ಜ್ಞಾನ ಸೃಷ್ಟಿ ಮತ್ತು ಅರ್ಥಗರ್ಭಿತ ಚಿಂತನೆಗೆ ಸ್ವಾಮಿ ವಿವೇಕಾನಂದರ ಕೊಡುಗೆ ಕುರಿತು ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಜ್ಞಾನಿ ಮತ್ತು ವಿಜ್ಞಾನಿ ಎರಡೂ ಆಗಿದ್ದರು. ಆಂತರಿಕ ಬ್ರಹ್ಮಾಂಡದ ಜೊತೆಗೆ ಬಾಹ್ಯ ಬ್ರಹ್ಮಾಂಡವನ್ನು ಅರ್ಥ ಮಾಡಿಕೊಳ್ಳುವ ಕಲೆ ಮತ್ತು ವಿಜ್ಞಾನವನ್ನು ಅವರು ಕರಗತ ಮಾಡಿಕೊಂಡಿದ್ದರು ಎಂದರು.
ಆಂತರಿಕ ಪ್ರಯಾಣದ ಮೂಲಕ ಜ್ಞಾನವನ್ನು ಜ್ಞಾನ ಎಂದು ಮತ್ತು ಭೌತಿಕ, ಜೈವಿಕ ಮತ್ತು ರಾಸಾಯನಿಕ ವಿಜ್ಞಾನದಂತಹ ಬಾಹ್ಯ ಪ್ರಪಂಚದ ಜ್ಞಾನವನ್ನು ವಿಜ್ಞಾನ ಎಂದು ಕರೆಯಲಾಗುತ್ತದೆ. ಅದನ್ನು ಹೆಚ್ಚಿಸಲು ಅವರು ಮನಸ್ಸಿನ ನಿರ್ವಹಣೆ ಅಥವಾ ಮನಸ್ಸಿನ ಎಂಜಿನಿಯರಿಂಗ್‍ಗೆ ಒತ್ತು ನೀಡಿದ್ದಾರೆ ಎಂದು ಅವರು ತಿಳಿಸಿದರು.
ಐಐಎಸ್ಸಿ, ಟಿಐಎಫ್‍ಆರ್ ಅನ್ನು ಸ್ಥಾಪಿಸಲು ಅವರು ಟಾಟಾಗೆ ಪ್ರೇರಣೆ ನೀಡಿದ್ದಾರೆ ಮತ್ತು ಬಾರ್ಕ್ ಮತ್ತು ಇಸ್ರೋನಂತಹ ಅನೇಕ ವೈಜ್ಞಾನಿಕ ಸಂಸ್ಥೆಗಳನ್ನು ಸ್ಥಾಪಿಸಲು ಅವರು ಸ್ಫೂರ್ತಿಯಾಗಿದ್ದರು. ಐನ್‍ಸ್ಟೈನ್, ಹೈಸೆನ್‍ಬರ್ಗ, ಗುಡ್ವಿನ್ ಮತ್ತು ಇತರೆ ಪಾಶ್ಚಾತ್ಯ ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳಿಗೆ ಅವರು ಸ್ಫೂರ್ತಿಯಾಗಿದ್ದರು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಎಂ.ವಿ. ಅಲಗವಾಡಿ ಅವರು ಮಾತನಾಡಿ, ವಿಜ್ಞಾನಿಗಳು ಸಮಯ ಮತ್ತು ಸ್ಥಳವು ಕಣ್ಮರೆಯಾಗುತ್ತವೆ ಎಂದು ನಿರೂಪಿಸಲು ಪ್ರಯತ್ನಿಸುತ್ತಿರುವಾಗ ಸ್ವಾಮಿ ವಿವೇಕಾನಂದರು ನಿರ್ವಕಲ್ಪ ಸಮಾಧಿಯನ್ನು ಅನುಭವಿಸಿದ್ದಾರೆ. ನಾವು ಭಾರತೀಯರು ವಸುದೈವ ಕುಟುಂಬಕಂ ಎಂದು ನಂಬುತ್ತೇವೆ. ಆದ್ದರಿಂದ ಸ್ವಾಮಿ ವಿವೇಕಾನಂದರು ನಾನು ಭಾರತೀಯ ಮತ್ತು ಹಿಂದೂ ಹೆಮ್ಮೆಪಡುತ್ತೇನೆ ಎಂದು ಹೇಳಿದರು. ಅದೇ ಸಮಯದಲ್ಲಿ ಅವರು ಜಾತಿವಾದ ಮತ್ತು ಅಸ್ಪøಶ್ಯತೆಯಂತಹ ತಪ್ಪು ಅಭ್ಯಾಸಗಳನ್ನು ಟೀಕಿಸಿದ್ದಾರೆ. ನೀವು ಉತ್ತಮ ನಡತೆ ಹೊಂದಿದ್ದರೆ ಮತ್ತು ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ಭಾವನಾತ್ಮಕವಾಗಿ ಸದೃಢವಾಗಿದ್ದರೆ ನೀವು ಜೀವನದಲ್ಲಿ ಏನನ್ನೂ ಸಾಧಿಸಬಹುದು ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ. ಎಸ್. ಲಿಂಗಮೂರ್ತಿ ಅವರು ಪರಿಚಯಾತ್ಮಕ ಭಾಷಣ ಮಾಡಿ, ಸ್ವಾಮಿ ವಿವೇಕಾನಂದರು ಯುವಕರ ಪ್ರತಿಮೆ ಎಂದರು. ಈ ಸಂದರ್ಭದಲ್ಲಿ ಕುಲಸಚಿವ ಪ್ರೊ. ಮಸ್ತಾಕ್ ಅಹ್ಮದ್ ಐ. ಪಟೇಲ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದಂ, ಡೀನ್, ಮುಖ್ಯಸ್ಥರು, ಅಧ್ಯಾಪಕರು ಮತ್ತು ಸಿಬ್ಬಂದಿ, ಹಣಕಾಸು ಅಧಿಕಾರಿ ಪ್ರೊ. ಬಿ.ಆರ್. ಕೆರೂರ್ ಮುಂತಾದವರು ಉಪಸ್ಥಿತರಿದ್ದರು. ಡಾ. ರಮ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ಅನಂತ್ ಚಿಂಚೂರೆ ಅವರು ವಂದಿಸಿದರು.