ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹ

ಧಾರವಾಡ, ಡಿ 31: ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದ ರೈತರು, ಕಾರ್ಮಿಕರು ಹಾಗೂ ಬಡವರ ಜೀವನಮಟ್ಟ ಕ್ಷೀಣಿಸುತ್ತಿದ್ದು, ರೈತರಿಗೆ ಮಾರಕವಾಗುವ ಕೃಷಿ ಮಸೂದೆಗಳನ್ನು ಜಾರಿಗೆ ತಂದು ಮತ್ತಷ್ಟು ರೈತರ ಆತ್ಮಹತ್ಯೆಗೆ ಕೇಂದ್ರ ಸರ್ಕಾರ ಕಾರಣವಾಗುತ್ತಿದೆ ಎಂದು ಲೋಕತಾಂತ್ರಿಕ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಫಿರೋಜ್ ಖಾನ್ ಹವಾಲ್ದಾರ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆದಾಯ ದ್ವಿಗುಣಗೊಳಿಸಬೇಕಾದರೆ ಎಮ್.ಎಸ್. ಸ್ವಾಮಿನಾಥನ್ ವರದಿ ಜಾರಿ ಅವಶ್ಯ ಎಂದು ನುಡಿದರು.
ಸುಮಾರು ಶೇ. 87 ರಷ್ಟು ರೈತರು ಬ್ಯಾಂಕ್ ಸಾಲದಿಂದ ವಂಚಿತರಾಗಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ವಿರೋಧಿ ಕಾನೂನುಗಳನ್ನು ರಾಜ್ಯ ಸರ್ಕಾರ ಯಥಾವತ್ ಜಾರಿಗೆ ತಂದು ರೈತರ ನಂಬಿಕೆಗೆ ದ್ರೋಹ ಬಗೆದಿದೆ ಎಂದು ಖಂಡಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಇದುವರೆಗೂ ಬಿಡುಗಡೆಗೊಳಿಸಿಲ್ಲ. ಸರ್ಕಾರ ಶೀಘ್ರವಾಗಿ ಜಾತಿಗಣತಿ ಬಹಿರಂಗಗೊಳಿಸಬೇಕೆಂದು ಆಗ್ರಹಿಸಿದರು.
ಬಡತನ ರೇಖೆಗಿಂತ ಕೆಳಗಿದ್ದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 5 ಸಾವಿರ ರೂ. ನೀಡಬೇಕಿತ್ತು. ಸರ್ಕಾರದ ಗಮನ ಎಲ್ಲಿದೆ ಎಂದವರು ಪ್ರಶ್ನಿಸಿದರು. ಜಿಲ್ಲೆಯ ವಾಲ್ಮಿ ಅಭಿವೃದ್ದಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಮುಖಂಡರಾದ ಶ್ರೀಶೈಲಗೌಡ ಕಮತರ, ಮೈನುದ್ದೀನ್ ಖಾನ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು