ಸ್ವಾಭಿಮಾನಿ ಕನ್ನಡಿಗರಿಂದ ಭಾಷೆ, ಸಾಹಿತ್ಯ ಬೆಳೆಯಲು ಸಾಧ್ಯ

ಕಲಬುರಗಿ:ನ.29: ಇಂಗ್ಲೀಷ್ ಭಾಷೆ ಸೇರಿದಂತೆ ಬೇರೆ ಭಾಷೆ ಕಲಿಯಬೇಕು. ಆದರೆ ನಮ್ಮ ತಾಯಿಯ ಹೃದಯ ಭಾಷೆಯಾದ ಕನ್ನಡದಲ್ಲಿಯೇ ಮಾತನಾಡುವುದು, ಬರೆಯುವುದು, ಓದುವ ಕನ್ನಡ ಸಂಸ್ಕøತಿ, ಪರಂಪರೆಯನ್ನು ಹೊಂದಿರುವ ಅಪ್ಪಟ ಸ್ವಾಭಿಮಾನಿ ಕನ್ನಡಿಗರು ನಾವಾಗಬೇಕು. ಆಗ ಮಾತ್ರ ಕನ್ನಡಕ್ಕೆ ಯಾವುದೇ ತೊಂದರೆ ಬರುವುದಿಲ್ಲ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್. ಮಾರ್ಮಿಕವಾಗಿ ಹೇಳಿದರು.
ಸೇಡಂ ತಾಲೂಕಿನ ಕೋಡ್ಲಾದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜರುಗುತ್ತಿರುವ ಸರಣಿ ಕಾರ್ಯಕ್ರಮ-22ರಲ್ಲಿ ಮಂಗಳವಾರ ಜರುಗಿದ ‘ಕನ್ನಡದ ಪ್ರಸ್ತುತ ಸ್ಥಿತಿ-ಗತಿ ಮತ್ತು ಭವಿಷ್ಯದ ಸವಾಲುಗಳು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ, ಕನ್ನಡ ನಾಡಿಗೆ ಮಳಖೇಡದ ನೃಪತುಂಗ, ಶ್ರೀವಿಜಯ, ಕವಿರಾಜಮಾರ್ಗದ ನೆಲವಾದ ಸೇಡಂ ತಾಲೂಕಿನ ಕೊಡುಗೆ ಅಪಾರವಾಗಿದೆ. ನಮ್ಮ ನೆಲದ ಬಗ್ಗೆ ನಮಗೆ ಹೆಮ್ಮೆಯಿರಬೇಕು. ಕನ್ನಡದ ಬಗ್ಗೆ ಅಭಿಮಾನ ಶೂನ್ಯರಾಗುವುದು ಬೇಡ. ನೃಪತುಂಗನ ನೆಲದಿಂದ ಕನ್ನಡದ ರತ್ನಗಳು ಹೊರಹೊಮ್ಮಬೇಕು. ದೇವರಿಗೆ ಕನ್ನಡವನ್ನು ಕಲಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಸೇಡಂ ತಾಲೂಕಿನ ಕೆಲವು ಭಾಗದಲ್ಲಿ ತೆಲುಗು ಬಳಕೆ ಕಂಡುಬರುತ್ತಿದೆ. ಕನ್ನಡದಲ್ಲಿ ಮಾತನಾಡಿ, ಭಾಷೆಯನ್ನು ಬೆಳೆಸಬೇಕು. ಮಾತೃಭಾಷೆಯಾದ ಕನ್ನಡದ ಬಳಕೆ ಕಡಿಮೆಯಾಗಿ, ಬೇರೆ ಭಾಷೆಗಳ ಹಾವಳಿ ಹೆಚ್ಚಾದರೆ, ಆಗ ಕನ್ನಡದ ಅಸ್ಮಿತೆಯ ಸವಾಲು ಎದುರಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಕಸಾಪ ಕಲಬುರಗಿ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಶಾಲೆಯ ಪ್ರಾಂಶುಪಾಲೆ ಪ್ರಮೀಳಾ ಮತ್ತಿಮೂಡ, ಶಿಕ್ಷಕರಾದ ನಿಂಬಾಬಾಯಿ, ಹೂವಪ್ಪ, ಮೆಹಬೂಬ್, ರಾಜೇಶ್ವರಿ, ಗೋವರ್ಧನರೆಡ್ಡಿ, ಸುಚೀತಾ, ರಫೀಯಾ ಬೇಗಂ, ಸುವರ್ಣಾ, ರೇಣುಕಾ, ಶುಶ್ರೂಷಕಿ ಲಕ್ಷ್ಮೀಬಾಯಿ, ಪ್ರ.ದ.ಸ ಸುಭಾಷ್, ನಿಲಯ ಪಾಲಕಿ ಅನಿತಾ, ಸಿಬ್ಬಂದಿ ದೇವಿಂದ್ರಪ್ಪ ಹಾಗೂ ನೂರಾರು ಜನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.