ಸ್ವಾಭಿಮಾನವಿಲ್ಲದಿದ್ದರೆ ಗುಲಾಮಗಿರಿಗೆ ಬಲಿಯಾಗಬೇಕಾಗುತ್ತದೆ:ಸಿಎಂ ಸಿದ್ದರಾಮಯ್ಯ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.12:- ಬೇರೆ ಪಕ್ಷಗಳಲ್ಲಿದ್ದರೂ ನನ್ನ ಹಾಗೂ ಶ್ರೀನಿವಾಸ್ ಪ್ರಸಾದ್ ರ ನಡುವೆ ಉತ್ತಮ ಸ್ನೇಹ ಬಾಂಧವ್ಯ ಹಾಗೂ ಒಡನಾಡವಿತ್ತು. ಪರಸ್ಪರ ರಾಜಕೀಯ ವೈರುಧ್ಯಗಳಿದ್ದರೂ ತಮ್ಮ ಸ್ನೇಹಕ್ಕೆ ಎಂದೂ ಧಕ್ಕೆ ಬಂದಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ರವರೊಂದಿಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡರು.
ಮೈಸೂರಿನಲ್ಲಿ ನಡೆದ ಹಿರಿಯ ನಾಯಕ, ರಾಜಕೀಯ ಮುತ್ಸದ್ಧಿ ದಿವಂಗತ ವಿ.ಶ್ರೀನಿವಾಸಪ್ರಸಾದ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಜರುಗಿದ ‘ಸ್ವಾಭಿಮಾನಿಗೆ ಸಾವಿರದ ನುಡಿನಮನ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮೊದಲು ಜನತಾದಳ ಪಕ್ಷದಿಂದ ಶ್ರೀನಿವಾಸ್ ಪ್ರಸಾದ್ ರವರು ಲೋಕಸಭೆ ಹಾಗೂ ನಂತರ ವಿಧಾನಸಭಾ ಚುನಾವಣೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದರು. ಇದಾದ ಬಳಿಕ ಕಾಂಗ್ರೆಸ್ ಪಕ್ಷವನ್ನು ಸೇರಿದ ಶ್ರೀನಿವಾಸ್ ಪ್ರಸಾದ್ ಹಾಗೂ ನಾನು ಬೇರೆ ಪಕ್ಷಗಳಲ್ಲಿದ್ದರೂ ನಮ್ಮಲ್ಲಿ ಪರಸ್ಪರ ಸ್ನೇಹ ಹಾಗೂ ಗೌರವಗಳಿದ್ದವು. ಅವರು ವಿವಿಧ ಪಕ್ಷಗಳಲ್ಲಿ ಹಲವು ನಾಯಕರೊಂದಿಗೆ ಸ್ನೇಹ ಹಾಗೂ ಒಡನಾಟವನ್ನು ಹೊಂದಿದ್ದರು. ಮನುಷ್ಯತ್ವದಿಂದ ಕೂಡಿದ ಸಜ್ಜನರಾಗಿದ್ದರು. ಅವರು ಯಾವುದೇ ಪಕ್ಷದಲ್ಲಿದ್ದೂ ಡಾ. ಅಂಬೇಡ್ಕರ್ ರವರ ವಿಚಾರಧಾರೆಗಳ ಅನುಯಾಯಿಯಾಗಿದ್ದರು ಎಂದರು.
ರಾಜಕೀಯ ಟೀಕೆಗಳು ಸ್ವಾಭಾವಿಕ: ಸಂವಿಧಾನದ ಬಗ್ಗೆ ಅಪಾರ ಗೌರವ ಹೊಂದಿದ್ದರು.ಅವಕಾಶ ವಂಚಿತರಿಗೆ ಜಾತ್ಯಾತೀತವಾಗಿ ಸಮಾನ ಅವಕಾಶವನ್ನು ನೀಡಬೇಕೆಂಬುದನ್ನು ನಂಬಿ ಸಂವಿಧಾನದ ಬಗ್ಗೆ ಬದ್ಧತೆಯನ್ನು ಹೊಂದಿದ್ದರು. ಬುದ್ಧ,ಬಸವಣ್ಣ,ಗಾಂಧೀಜಿಯವರ ವಿಚಾರಧಾರೆಗಳನ್ನು ನಂಬಿ ನಡೆಯುವವರು ಎಂದಿಗೂ ಮನುಷ್ಯತ್ವವನ್ನು ಪಾಲಿಸುವವರಾಗಿರುತ್ತಾರೆ. ಮನುಷ್ಯ ಮನುಷ್ಯನನ್ನು ಪರಸ್ಪರ ಗೌರವಿಸಬೇಕೇ ಹೊರತು ದ್ವೇಷಿಸಬಾರದು. ರಾಜಕೀಯ ವೈರುಧ್ಯಗಳಿಂದಾಗಿ ಪರಸ್ಪರ ಟೀಕಿಸುವುದು ಸ್ವಾಭಾವಿಕವಾಗಿದ್ದರೂ, ನಮ್ಮ ಸ್ನೇಹಕ್ಕೆಂದೂ ಧಕ್ಕೆ ಬಂದಿಲ್ಲ. ಇತ್ತೀಚೆಗೆ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಪಡೆದ ನಂತರ, ನನ್ನ ಕೆಲವು ಶಾಸಕಮಿತ್ರರೊಂದಿಗೆ ಅವರನ್ನು ಭೇಟಿ ಮಾಡಿದ್ದೆ. ಅವರೊಂದಿಗಿನ ಅರ್ಧ ಗಂಟೆಯ ಭೇಟಿಯಲ್ಲಿ ನಮ್ಮ ಹಿಂದಿನ ಸ್ನೇಹ ಮರುಕಳಿಸಿತ್ತು. ನಮ್ಮ ನಡುವೆ ಯಾವುದೇ ರಾಜಕೀಯ ಮಾತುಕತೆ ನಡೆಯಲಿಲ್ಲ. ಆದರೆ ಶ್ರೀನಿವಾಸ್ ಪ್ರಸಾದ್ ಅವರು, ರಾಜಕೀಯದಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿತ್ತು ಎಂದು ಹೇಳಿದ್ದರು ಎಂದರು.
ಸ್ವಾಭಿಮಾನವಿಲ್ಲದಿದ್ದರೆ ಗುಲಾಮಗಿರಿಗೆ ಬಲಿ: ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಹಾಗೂ ಬಡವರಿಗೆ ಸ್ವಾಭಿಮಾನವಿರಲೇಬೇಕು. ನಮ್ಮಲ್ಲಿ ಸ್ವಾಭಿಮಾನವಿದ್ದರೆ ಮಾತ್ರ ಮನುಷ್ಯರಾಗಿ ಬಾಳಲು ಸಾಧ್ಯ, ಇಲ್ಲದಿದ್ದರೆ ಗುಲಾಮಗಿರಿಗೆ ಗುರಿಯಾಗಬೇಕಾಗುತ್ತದೆ. ಶ್ರೀನಿವಾಸ್ ಪ್ರಸಾದ್ ಅವರು ಎಂದೂ ಗುಲಾಮಗಿರಿಗೆ ಬಲಿಯಾಗಿರಲಿಲ್ಲ. ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡಿದವರು. ಹಳೆಯ ತಲೆಮಾರಿನ ಈ ರಾಜಕೀಯ ಮುತ್ಸದ್ದಿಯ ನಿಧನದಿಂದ ಮಹತ್ತರವಾದ ರಾಜಕೀಯ ಕೊಂಡಿ ಕಳಚಿದಂತಾಗಿದೆ. ಅವರ ವಿಚಾರಧಾರೆಗಳು ಇಂದಿನ ಯುವಜನರಿಗೆ ಆದರ್ಶವಾಗಿರಬೇಕು ಎಂದರು.
ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ವಿ.ಶ್ರೀನಿವಾಸಪ್ರಸಾದ್ ಅವರ ತಮ್ಮ 50 ವರ್ಷಗಳ ಸುದೀರ್ಘವಾದ ಸಾರ್ವಜನಿಕ ಜೀವನದಲ್ಲಿ ನಡೆ, ನುಡಿ, ನಿಲುವು, ಬದ್ಧತೆ ಅತ್ಯಂತ ಪ್ರಮುಖವಾದವು. ಪ್ರಸಾದರನ್ನು ವಿಭಿನ್ನವಾಗಿ ನೋಡುವುದು ಯಾಕೆಂದರೆ ಸಂಘಟನೆ ಮುಖಾಂತರ ಹೋರಾಟ ಮಾಡಿದ್ದರು. ಹೋರಾಟ ವ್ಯಕ್ತಿತ್ವವನ್ನು ರೂಪಿಸುತ್ತದೆ. ವ್ಯಕ್ತಿತ್ವ ನೈತಿಕತೆ ನೀಡುತ್ತದೆ. ಈ ಎಲ್ಲಾ ವಿಷಯಗಳು ಅವರನ್ನು ಪ್ರಬುದ್ಧ ನಾಯಕರಾಗಿ ರೂಪಿಸಿದವೆಂದರು.
ಸೈದ್ದಾಂತಿಕ ನಿಲುವಿನಲ್ಲಿ ಗಟ್ಟಿತನ ಯಾರಲ್ಲಿ ಇರುತ್ತದೆಯೋ ಅವರು ಮಾತ್ರ ಸ್ವಾಭಿಮಾನಿಯಾಗಲು ಸಾಧ್ಯ. ಅದಕ್ಕೆ ಅಂಬೇಡ್ಕರ್ ಅವರು ಸ್ವಾಭಿಮಾನಿ ಅಲ್ಲದವರು ಬದುಕಿದ್ದು ಪ್ರಯೋಜನವಿಲ್ಲ ಎಂದಿದ್ದರು. ಅದಕ್ಕೆ ತಕ್ಕಂತೆ ಪ್ರಸಾದರು ಗಟ್ಟಿ ನಿಲುವಿನೊಂದಿಗೆ ಸ್ವಾಭಿಮಾನಿ ಜೀವನ ನಡೆಸಿದರು. ಶ್ರೀನಿವಾಸಪ್ರಸಾದರಿಗೆ ಸಾಮಾಜಿಕ ವ್ಯವಸ್ಥೆಯ ವಿರುದ್ದವಾಗಿದ ಸಾತ್ವಿಕ ಸ್ವಾಭಾವದ ಸಿಟ್ಟು ಬಹಳಿಷ್ಟಿತ್ತು. ಅನ್ಯಾಯವನ್ನು ಸಹಿಸಿಕೊಳ್ಳದೆ ತಕ್ಷಣ ಪ್ರತಿಕ್ರಿಯಿಸುತ್ತಿದ್ದರು. ನಮ್ಮ ಸಮಾಜದಲ್ಲಿ ಇದ್ದಂತಹ ಬದುಕಿನ ಅಸ್ತವ್ಯಸ್ತತೆ, ತಾರತಮ್ಯಗಳು, ಪ್ರತ್ಯೇಕತವಾದಗಳು, ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಮನುವಾದದ ವಿರುದ್ಧದ ಸಿಟ್ಟನ್ನು ಹೊರಹಾಕುತ್ತಿದ್ದರು. ಅದರಲ್ಲಿ ಯಾವುದೇ ಸಮುದಾಯ, ವ್ಯಕ್ತಿಯನ್ನು ನಿಂದನೆ ಮಾಡುವಂಥ ಉದ್ದೇಶ ಇರಲಿಲ್ಲ ಎಂದರು.
ಅವರ ನಿಲುವುಗಳು ಯಾವುದೇ ರಾಜಕೀಯ ದುರುದ್ದೇಶದಿಂದ ಕೂಡಿರಲಿಲ್ಲ. ಸದಾಕಾಲ ಅನ್ಯಾಯಕ್ಕೆ, ಶೋಷಣೆಗೆ ಒಳಗಾದವರ, ದನಿ ಇಲ್ಲದವರ, ಉತ್ತಮ ಬದುಕಿನ ಸವಲತ್ತುಗಳಿಂದ ವಂಚಿತರಾದ ಸಮುದಾಯಗಳ ಪರವಾಗಿತ್ತೆಂದರು.
2013 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಪ್ರಸಾದರಿಗೆ ಕಂದಾಯ ಇಲಾಖೆ ಖಾತೆಯನ್ನು ನೀಡಲಾಯಿತು. ಆರೋಗ್ಯ ಸರಿಯಿಲ್ಲದ ಕಾರಣ ರಾಜ್ಯದಲ್ಲಿ ಪ್ರವಾಸ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯ ಕೇಳಿ ಬಂದರೂ, ಅವರು ಹಿರಿಯ ನಾಯಕರು ಸಾಧ್ಯವಾಗುವಷ್ಟು ಕೆಲಸ ಮಾಡಲಿ, ಜನರ ಪರವಾಗಿ ಗಟ್ಟಿದನಿಯಾಗಿರಲಿ ಎಂದು ಸಿಎಂ ಹೇಳಿದರು.
ಕೆಲವು ದಿನಗಳ ಹಿಂದೆಯಷ್ಟೇ ರಾಜಕೀಯ ನಿವೃತ್ತಿ ಘೋಷಿಸಿದಾಗಲೂ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಬನ್ನಿ ಎಂದು ಸಿದ್ದರಾಮಯ್ಯ ಅವರ ಸೂಚನೆ ನೀಡಿದ್ದರು. ಅಂದು ಅವರಿಗೆ ಅತ್ಯಂತ ಅಮಿತಾನಂದ ಉಂಟಾಗಿದ್ದನ್ನು ಕಂಡಿದ್ದೆವು. ಆದಾದ ಬಳಿಕ ಮುಖ್ಯಮಂತ್ರಿಗಳೂ ಭೇಟಿ ಮಾಡಿದ್ದರು. ಇದು ಯಾವುದೇ ಉದ್ದೇಶವಿಲ್ಲದ ಭೇಟಿಯಾಗಿತ್ತು. ಅದನ್ನು ನೆನೆದರೆ ಇಂದು ಬಹಳ ನೋವು ಉಂಟಾಗುತ್ತದೆ.
ಪ್ರಸಾದರು ಮೂರು ಸಂಸ್ಥೆಗಳನ್ನು ಕಟ್ಟಿದ್ದಾರೆ. ಅವರ ಅಭಿಲಾಷೆಯನ್ನು ಈಡೇರಿಸಲು ಸಕಾರಾತ್ಮಕವಾಗಿ ಪ್ರಯತ್ನ ಮಾಡಲಾಗುವುದು. ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂಥ ಕೆಲಸವನ್ನು ಪ್ರಸಾದರು ಮಾಡಿದ್ದಾರೆ. ಸಂವಿಧನಾ ವಿಷಯದಲ್ಲಿ ಬದ್ದತೆ ಇಟ್ಟಿದ್ದರು. ಬುದ್ದ, ಬಸವ, ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಯವ ನಿಟ್ಟಿನಲ್ಲಿ ಬದುಕಿ ತೋರಿಸಿಕೊಟ್ಟಿದ್ದಾರೆಂದರು.