ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟ ಡಾ.ಬಾಬಾಸಾಹೇಬ್ ಅಂಬೇಡ್ಕರ

ಕಲಬುರಗಿ,ಡಿ.6: ಡಾ.ಬಾಬಾಸಾಹೇಬ್ ಅಂಬೇಡರ್ ಅವರ ಹೆಸರೇ ಕೋಟ್ಯಂತರ ಜನರಿಗೆ ಸ್ಪೂರ್ತಿ. ದಮನಿತರ ಧ್ವನಿಯಾಗಿ, ಶೋಷಿತರಿಗೆ ಕಿವಿಯಾಗಿ, ಪಶು-ಪಕ್ಷಿಗಳಿಗಿಂತ ಕೀಳಾಗಿ ಕಾಣುತ್ತಿದ್ದ ಶೋಷಿತ-ದಲಿತ ವರ್ಗಕ್ಕೆ ಶಿಕ್ಷಣ, ಸಂಘಟನೆ, ಹೋರಾಟದ ತತ್ವ ಹಾಗೂ ಸರ್ವ ನ್ಯಾಯಕ್ಕಾಗಿ ಸಂವಿಧಾನವನ್ನು ನೀಡಿ, ಸ್ವಾಭಿಮಾನದ ಬದುಕು ಕಲ್ಪಿಸಿಕೊಟ್ಟ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಸಮಸ್ಥ ಮಾನವ ಕುಲ ಎಂದಿಗೂ ಮರೆಯುವಂತಿಲ್ಲ ಎಂದು ಪ್ರಾಚಾರ್ಯ ಮೊಹಮ್ಮದ್ ಅಲ್ಲಾಉದ್ದೀನ್ ಸಾಗರ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಮದಿಗೆ ಸೋಮವಾರ ಜರುಗಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 65ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಬಾಬಾಸಾಹೇಬ್‍ರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಡಾ.ಬಾಬಾಸಾಹೆಬ್ ಅಂಬೇಡ್ಕರ ಅವರು ಒಬ್ಬ ವ್ಯಕ್ತಿಯಲ್ಲ. ಬದಲಿಗೆ ದೇಶದ ದೊಡ್ಡ ಶಕ್ತಿಯಾಗಿದ್ದಾರೆ. ಎಲ್ಲರಿಗೂ ಸಮಾನತೆ, ನ್ಯಾಯವನ್ನು ಒದಗಿಸಿಕೊಟ್ಟ ಮಹಾಮಾನವತಾವಾದಿಯಾಗಿದ್ದಾರೆ. ಅಂಬೇಡ್ಕರ ಎಂಬ ಶಕ್ತಿ ಇರುವದರಿಂದಲೇ ದೇಶದಲ್ಲಿ ಎಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಅವರನ್ನು ಪುಸ್ತಕದಿಂದ ತಿಳಿದುಕೊಳ್ಳದೆ, ಹೃದಯದಿಂದ ಅರಿತುಕೊಂಡರೆ ಬಾಬಾಸಾಹೇಬರು ಹೆಚ್ಚು ಅರ್ಥವಾಗುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಅಂಬೇಡ್ಕರ ಅವರನ್ನು ನಿಜವಾಗಿ ಅರ್ಥಮಾಡಿಕೊಂಡಿರುವವರ ಸಂಖ್ಯೆ ವಿರಳ. ಅವರನ್ನು ಭಾವಚಿತ್ರದ ಪೂಜೆಗಷ್ಟೆ ಸೀಮಿತ ಮಾಡಿದರೆ ಪ್ರಯೋಜನೆಯಿಲ್ಲ. ಪ್ರತಿಯೊಬ್ಬರು ಶಿಕ್ಷಣ ಪಡೆದು, ಸಂವಿಧಾನ ನೀಡಿರುವ ಎಲ್ಲಾ ಸೌಕರ್ಯಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು. ಬಾಬಾಸಾಹೇಬರ್ ತತ್ವಗಳನ್ನು ಜೀವನದಲ್ಲಿ ತಪ್ಪದೆ ಪಾಲಿಸಿ, ದೇಶಕ್ಕೆ ಕೊಡುಗೆಯನ್ನು ನೀಡಿದರೆ, ಅದೇ ನಾವು ಅವರಿಗೆ ನೀಡುವ ದೊಡ್ಡ ಗೌರವವಾಗಿದೆ ಎಂದರು.
ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪುರಕರ್, ರವೀಂದ್ರಕುಮಾರ ಬಟಗೇರಿ, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಮಂಜುನಾಥ ಎ.ಎಂ., ಪ್ರಕಾಶ ಪಾಟೀಲ, ಪ್ರ.ದ.ಸ ನೇಸರ ಎಂ.ಬೀಳಗಿ, ಅತಿಥಿ ಉಪನ್ಯಾಸಕರಾದ ಲಾಡ್ಲೆ ಮಶಾಕ್, ವಿಜಯಲಕ್ಷ್ಮೀ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.