ಸ್ವಾಭಿಮಾನದಿಂದ ಎಲ್ಲರೂ ಮತದಾನ ಮಾಡಲು ಜಾಗೃತಗೊಳಿಸಿ


ಧಾರವಾಡ, ಜ.25: ಚುನಾವಣೆಗಳು ಪ್ರಜಾತಂತ್ರದ ಜೀವಾಳ. ಚುನಾವಣೆ, ಜನಪ್ರತಿನಿಧಿಗಳ ಆಯ್ಕೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೋಳ್ಳಲು ಮತದಾರರಲ್ಲಿ ಅವರ ಹಕ್ಕು ಮತ್ತು ಕರ್ತವ್ಯಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ ಎಫ್.ದೊಡ್ಡಮನಿ ಅವರು ಹೇಳಿದರು.
ಅವರು ಭಾರತ ಚುನಾವಣಾ ಆಯೋಗ ಮತ್ತು ಧಾರವಾಡ ಜಿಲ್ಲಾಡಳಿತ ಸಂಯುಕ್ತವಾಗಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಪ್ರತಿಯೊಬ್ಬರು ಚುನಾವಣೆಗಳಲ್ಲಿ ತಪ್ಪದೇ ಮತದಾನ ಮಾಡಬೇಕು. ಪಾರದರ್ಶಕವಾದ ಆಡಳಿತ ನೀಡಲು ಜನಪರವಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಜನರಿಗೆ ಅಗತ್ಯವಿರುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಪರಮಾಧಿಕಾರ ಮತದಾರರಿಗೆ ಇದೆ. ಇದಕ್ಕೆ ಮೂಲ ಕಾರಣ ನಿರ್ಭಿತವಾದ, ಮುಕ್ತ, ನ್ಯಾಯಸಮ್ಮತವಾಗಿ ಜರುಗುವ ಚುನಾವಣೆಗಳು ಎಂದು ಅವರು ಹೇಳಿದರು.
ಚುನಾವಣೆಗಳ ಸಮಯದಲ್ಲಿ ಉಚಿತ ಉಡುಗೊರೆ, ಹಣ, ಸರಾಯಿ ಹಂಚಿಕೆ ಬಗ್ಗೆ ಎಚ್ಚರವಿದ್ದು, ಅವುಗಳನ್ನು ತಿರಸ್ಕರಿಸಬೇಕು. ಇಂತಹ ಆಮಿಷಗಳಿಗೆ ಮತದಾರರು ಬಲಿಯಾಗದೆ ಅವುಗಳನ್ನು ಹಂಚುವವರನ್ನು ವಿರೋಧಿಸಬೇಕು. ಎಲ್ಲ ಮತದಾರರು ಸ್ವಾಭಿಮಾನಿಗಳಾಗಿ ತಮ್ಮ ಮತದಾನದ ಹಕ್ಕು ತಪ್ಪದೇ ಚಲಾಯಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್.ದೊಡ್ಡಮನಿ ತಿಳಿಸಿದರು.
ಊರಿನ ಅಭಿವೃದ್ಧಿ, ಜನಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ, ಎಲ್ಲ ಮತದಾರರು ಮತ ಚಲಾಯಿಸಬೇಕು ಮತ್ತು ಮತದಾನದ ಪ್ರಮಾಣ ಹೆಚ್ಚಳವಾಗಬೇಕು ಎಂದು ಅವರು ತಿಳಿಸಿದರು.
ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸ್ವಾಗತಿಸಿದರು. ಧಾರವಾಡ ತಹಸಿಲ್ದಾರ ದೊಡ್ಡಪ್ಪ ಹೂಗಾರ ವಂದಿಸಿದರು. ನಿವೃತ್ತ ಮುಖ್ಯೋಪಾದ್ಯ ಕೆ.ಎಂ.ಶೇಖ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಚುನಾವಣಾ ರಾಯಬಾರಿ, ಪದ್ಮಶ್ರೀ ಪುರಸ್ಕøತ ಪಂಡಿತ ವೇಂಕಟೇಶಕುಮಾರ, ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಎ.ಚನ್ನಪ್ಪ ಮಾತನಾಡಿದರು. ಮನಗುಂಡಿ ಗ್ರಾಮದ ಶತಾಯುಷಿ ಮತದಾರರಾದ ಬಸವಣ್ಣೆವ್ವ ಹುಂಬೇರಿ ಅವರು ವೇದಿಕೆಯಲ್ಲಿದ್ದರು.