ಸ್ವಾತಂತ್ರ್ಯ ಹೋರಾಟದಲ್ಲಿ ವಿಪ್ಲವ ಪತ್ರಿಕೆಗಳ ಪಾತ್ರ ಹಿರಿದು

ಕಲಬುರಗಿ,ಸೆ.14: ಸ್ವಾತಂತ್ರ್ಯ ಹೋರಾಟ ಕಾಲದ ಪತ್ರಿಕೆಗಳು ವಿಪ್ಲವ ಪತ್ರಿಕೆಗಳಾಗಿ ಬ್ರಿಟಿಷ್ ಆಡಳಿತದ ವಿರೋಧಿ ದನಿ ಆಗಿರದೆ ಆಧುನಿಕ ಪ್ರಜಾಸತ್ತೆಯ ತತ್ವಗಳಾದ ಸಮಾನತೆ ಭ್ರಾತೃತ್ವ ಹಾಗೂ ವಿಚಾರ ಸ್ವಾತಂತ್ರ್ಯವನ್ನು ಜನಮಾನಸಕ್ಕೆ ತಿಳಿಸುವ ಗುರುತರ ಹೊಣೆ ಹೊಂದಿದ್ದುವು ಎಂದು ಹಿರಿಯ ಪತ್ರಕರ್ತರಾದ ಬೆಳಗಾವಿಯ ‘ದಿ ಹಿಂದೂ’ ದೈನಿಕದ ಮುಖ್ಯವರದಿಗಾರರಾದ ಹೃಷಿಕೇಶ ಬಹಾದೂರ್ ದೇಸಾಯಿ ಹೇಳಿದರು.
ಕಲಬುರಗಿ ಆಕಾಶವಾಣಿಯಲ್ಲಿ ಸೆಪ್ಟಂಬರ 13ರಂದು ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದಂಗವಾಗಿ 20ನೇ ನೇರ ಪ್ರಸಾರದ ಸರಣಿಯಲ್ಲಿ “ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳ ಪಾತ್ರ” ಕುರಿತಾಗಿ ಅವರು ಉಪನ್ಯಾಸ ನೀಡಿದರು. ಕ್ರಾಂತಿಕಾರಿ ಹೋರಾಟಗಾರರು ಕೇವಲ ರಾಜಕೀಯ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರೆ ಅಂಬೇಡ್ಕರ್‍ರಂತಹ ಚಿಂತಕರು ಪತ್ರಿಕೆಗಳ ಮೂಲಕ ಸಾಮಾಜಿಕ ಆರ್ಥಿಕ ಮತ್ತು ಸಮಾನತೆಯ ಬಗ್ಗೆ ಸ್ವಾತಂತ್ರ್ಯದ ನಂತರದ ಆದರ್ಶ ಸಮಾಜ ಸರ್ಕಾರದ ಬಗೆ ಮಾತನಾಡಿದರು.
ಅನೇಕ ಹೋರಾಟಗಾರರು ವೃತ್ತಿಯಿಂದ ಪತ್ರಕರ್ತರಾಗಿರದೇ ಇದ್ದರೂ ಜನಜಾಗೃತಿಗಾಗಿ ಪತ್ರಿಕೆಗಳನ್ನು ಆರಂಭಿಸಿದರು. ಸ್ವಾಮಿ ವಿವೇಕಾನಂದ – ಅರವಿಂದ ಘೋಷ್, ರಾಜಾರಾಮ ಮೋಹನ್‍ರಾಯ್, ಈಶ್ವರಚಂದ್ರ ವಿದ್ಯಾಸಾಗರ್, ಮಹಾತ್ಮಾಗಾಂಧಿ, ಸುಭಾಷಚಂದ್ರ ಬೋಸ್, ಜೇಮ್ಸ ಹಿಕ್ಕಿ, ಅನಿಬೆಸೆಂಟ್ ಮುಂತಾದವರು ಪತ್ರಿಕೆಗಳ ಮೂಲಕ ಬ್ರಿಟಿಷರ ದಾಸತ್ವ ವಿಮೋಚನೆಗೆ ಶ್ರಮಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ ಹಿರಿಯ ಪತ್ರಕರ್ತರಾದ ಎಸ್. ಬಿ. ಜೋಶಿ ಮಾತನಾಡಿ ಈ ನೆಲದಲ್ಲಿ ಗುಲಾಮತನ ಅಳಿಸಿ ಸ್ವತಂತ್ರ ರಾಷ್ಟ್ರಕಟ್ಟಲು ಪತ್ರಿಕೆಗಳು ಮಹತ್ವದ ಹೊಣೆ ನಿರ್ವಹಿಸಿವೆ. ಸ್ವಾತಂತ್ರ್ಯ ಹೋರಾಟ, ಹೈದ್ರಾಬಾದ್ ಸಂಸ್ಥಾನ ವಿಮೋಚನೆಯ ಹೋರಾಟಗಳಲ್ಲಿ ಕಲಬುರಗಿ ಸೇರಿದ ಹೈದರಾಬಾದ್ ಕರ್ನಾಟಕದ ಭಾಗದ ಅನೇಕ ನಾಯಕರು ಹಾಗೂ ಪತ್ರಕರ್ತರು ರಾಷ್ಟ್ರೀಯವಾದದ ಚಿಂತನೆಯೊಂದಿಗೆ ಪತ್ರಿಕಾರಂಗಕ್ಕೆ ಮತ್ತು ಕನ್ನಡದ ಅಸ್ಮಿತೆ ಉಳಿಸಲು ಶ್ರಮಿಸಿದರೆಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ್ ಯಡ್ರಾಮಿ ಮಾತನಾಡಿ ಕಲಬುರಗಿ ಆಕಾಶವಾಣಿ ಕೇಂದ್ರದ ಸರಣಿ ಕಾರ್ಯಕ್ರಮ ಅತ್ಯಂತ ಮೌಲಿಕ ವಿಚಾರಧಾರೆ ಜನಮಾನಸಕ್ಕೆ ಬಿತ್ತುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ಸಮಸಮಾಜದ ನಿರ್ಮಾಣದ ಕನಸನ್ನು ಬಿತ್ತಿ ದೇಶಾದ್ಯಂತ ಸ್ವಾತಂತ್ರ್ಯದ ಕಿಡಿ ಹಚ್ಚಲು ಪ್ರೇರಣೆ ಆಗಿದೆ ಎಂದರು. ಗುಲಬರ್ಗಾ ವಿ.ವಿ. ಸಮೂಹ ಸಂವಹನ ವಿಭಾಗದ ಡಾ. ಕೆ. ಎಂ. ಕುಮಾರಸ್ವಾಮಿ ಮಾತನಾಡಿ ಆಕಾಶವಾಣಿಯಲ್ಲಿ ಮೂಡಿಬಂದ ಈ ಸರಣಿ ಉಪನ್ಯಾಸ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಉಪಯುಕ್ತ ಮತ್ತು ಸ್ವಾತಂತ್ರ್ಯದ ಇತಿಹಾಸವನ್ನು ಪುನರ್ ಮನನ ಮಾಡಿಸಿದೆ ಎಂದರು. ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಸಾಯಬಣ್ಣ ಮತ್ತು ಸುನಿಲ್‍ಕುಮಾರ ಬರ್ಮ ಪ್ರತಿಕ್ರಿಯೆ ನೀಡಿದರು. ಪತ್ರಕರ್ತರಾದ ಕುಮಾರ್ ಬುರಡಕಟ್ಟಿ, ಸಂಗಮನಾಥ ರೇವತಗಾಂವ, ಪತ್ರಿಕೋದ್ಯಮ ವಿಭಾಗದ ಚಿತ್ರಸೇನಾ, ವಿಜಯಕುಮಾರ, ಶಿವರಾಜ ಘಾಣೂರು, ಪೃಥ್ವಿರಾಜ ಸಾಗರ್, ಬಸವರಾಜ, ನರಸಿಂಹಲು, ಸಿದ್ದರಾಮ ಕಂಬಾರ ಉಪಸ್ಥಿತರಿದ್ದರು. ಡಾ. ಸದಾನಂದ ಪೆರ್ಲ ಸ್ವಾಗತಿಸಿದರು. ಕಾರ್ಯಕ್ರಮದ ಮುಖ್ಯಸ್ಥರಾದ ಪ್ರಕಾಶ ಮುಜುಂದಾರ ಅತಿಥಿಗಳನ್ನು ಗೌರವಿಸಿದರು. ಶಾರದಾ ಜಂಬಲದಿನ್ನಿ ನಿರೂಪಿಸಿದರು. ಸಂಗಮೇಶ ಧನ್ಯವಾದವಿತ್ತರು. ಜಿ.ವಿ. ಕುಲಕರ್ಣಿ ಮತ್ತು ಅನುಷಾ ಡಿ.ಕೆ. ತಾಂತ್ರಿಕ ನೆರವು ನೀಡಿದರು. ಲಕ್ಷ್ಮೀಕಾಂತ ಪಾಟೀಲ ನೆರವಾದರು ಎಂದು ಕಾರ್ಯಕ್ರಮ ಸಂಯೋಜಕರಾದ ಅನಿಲಕುಮಾರ ಎಚ್ ಎನ್ ತಿಳಿಸಿದರು.