ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ- ಕುಟುಂಬಸ್ಥರಿಗೆ ಸೌಲಭ್ಯ ಒದಗಿಸಲು ಮನವಿ

ದಾವಣಗೆರೆ.ಜು.೩೧: ರಾಜ್ಯದಲ್ಲಿನ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ, ಕುಟುಂಬಸ್ಥರ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ಹೆಚ್.ಆರ್.ಸದಾಶಿವಪ್ಪ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟಗಾರರ ಮಕ್ಕಳಿಗೆ ಕೇಂದ್ರ ಸರ್ಕಾರ 5ಸಾವಿರ, ರಾಜ್ಯ ಸರ್ಕಾರ 3ಸಾವಿರ ಮಾಸಿಕ ಗೌರವ ಧನ ಮಂಜೂರು ಮಾಡಬೇಕು. ಮನೆ ಕಟ್ಟಿಕೊಳ್ಳಲು ಯಾವುದೇ ಷರತ್ತು ಇಲ್ಲದೇ ತಲಾ 5 ಲಕ್ಷ ಸಹಾಯಧನ ನೀಡಬೇಕು ಎಂದು ಮನವಿ ಮಾಡಿದರು.ವಿಶೇಷ ಅರೋಗ್ಯ ವಿಮೆ, ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಉಭಯ ಸರ್ಕಾರಗಳು ಭರಿಸಬೇಕು. ಚುನಾವಣಾ ಗುರುತಿನ ಚೀಟಿ, ಆಧಾರ ಗುರುತಿನ ಚೀಟಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಎಂದು ನಮೂದು ಮಾಡಬೇಕು. ಪ್ರತ್ಯೇಕ ಪಡಿತರ ಚೀಟಿ ನೀಡಬೇಕು. ಅಡುಗೆ ಅನಿಲ ಸಂಪರ್ಕ, ಒಲೆ ನೀಡಬೇಕು. ಶೇ.50ರಷ್ಟು ರಿಯಾಯಿತಿ ದರದಲ್ಲಿ ನೀಡುವ ಜತೆ ಸರ್ಕಾರದ ಎಲ್ಲಾ ಯೋಜನೆಗಳಲ್ಲಿ ಮೀಸಲಾತಿ ನಿಗದಿ ಪಡಿಸಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.ಉಚಿತ ರೈಲ್ವೆ ಪಾಸ್, ಸಾರಿಗೆ ಪಾಸ್, ತಲಾ 5 ಎಕರೆ ಭೂಮಿಯನ್ನು ನೀಡಬೇಕು. ಕೃಷಿ  ಪಂಪುಸೆಟ್ಟುಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಬೇಕು. ಕೃಷಿಗೆ ಟ್ರ್ಯಾಕ್ಟರ್, ಉಪಕರಣಗಳನ್ನು 50ರಷ್ಟು ರಿಯಾಯಿತಿ ದರದಲ್ಲಿ ನೀಡಬೇಕು ಎಂದು ಮನವಿ ಮಾಡಿದರು.ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹ ಪ್ರಯೋಜನ ಆಗಿಲ್ಲ. ಸತ್ಯಾಗ್ರಹ, ಹೋರಾಟ ಮಾಡಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಕಾರಣ ಕೇಂದ್ರ, ರಾಜ್ಯ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೇಂದು ಒತ್ತಾಯಿಸಿದರು.