ಸ್ವಾತಂತ್ರ್ಯ ಹೋರಾಟಗಾರರ ಬದುಕನ್ನು ಮಾದರಿಯಾಗಿರಿಸಿಕೊಳ್ಳಿ

ಭಾಲ್ಕಿ:ಆ.6:ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಭಾರತ ಮಾತೆಯನ್ನು ಪರಕೀಯರ ದಾಸ್ಯದಿಂದ ಬಿಡುಗಡೆಗೊಳಿಸಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಹೋರಾಟಗಾರರ ಬದುಕು, ತತ್ವಗಳನ್ನು ಪ್ರತಿಯೊಬ್ಬರು ಮಾದರಿಯಾಗಿರಿಸಿಕೊಳ್ಳಬೇಕು ಎಂದು ಹಾರಕೂಡನ ಚನ್ನವೀರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಛಯದಲ್ಲಿ ಚನ್ನಬಸವೇಶ್ವರ ಗುರುಕುಲ ಪಬ್ಲಿಕ್ ಶಾಲೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 11 ದಿನಗಳ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶ ನನಗೇನು ಮಾಡಿದೆ ಎಂದು ಯೋಚಿಸದೆ ದೇಶಕ್ಕಾಗಿ ನಾನೇನು ಮಾಡಿದ್ದೇನೆ ಎಂದು ಪ್ರಶ್ನಿಸಿಕೊಂಡು ರಾಷ್ಟ್ರದ ಸರ್ವತೋಮುಖ ಪ್ರಗತಿಗೆ ಸರ್ವರೂ ಶ್ರಮಿಸಬೇಕು. ಅಂದಾಗ ಮಾತ್ರ ನಮ್ಮ ರಾಷ್ಟ್ರ ಪ್ರಪಂಚದಲ್ಲಿಯೇ ಪ್ರಗತಿ ಹೊಂದಿದ ರಾಷ್ಟ್ರವಾಗಿ ಬೆಳೆಯಲು ಸಾಧ್ಯವಿದೆ ಎಂದು ತಿಳಿಸಿದರು.

ಡಿವೈಎಸ್‍ಪಿ ಸೋಮಲಿಂಗ ಕುಂಬಾರ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ನಾಗರಿಕರು. ವಿದ್ಯಾರ್ಥಿಗಳು ಬಾಲ್ಯದಿಂದಲೇ ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಿ ಬಾಳಬೇಕು ಎಂದರು.

ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಧರ್ಮಕ್ಕಿಂತ ರಾಷ್ಟ್ರ ಮಿಗಿಲು. ರಾಷ್ಟ್ರ ಉಳಿದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ. ಹಾಗಾಗಿ, ಎಲ್ಲರೂ ಐಕ್ಯತೆ, ಸಾಮರಸ್ಯದಿಂದ ಬಾಳಬೇಕು ಎಂದು ತಿಳಿ ಹೇಳಿದರು.

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ರಾಷ್ಟ್ರ ಲಾಂಛನಗಳನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳು ಸಭಿಕರ ಮನ ಸೆಳೆದವು.

ಮಹಾಲಿಂಗ ಸ್ವಾಮೀಜಿ, ಸ್ಕ್ವ್ಯಾಡರ್ಸ್ ಲೀಡರ್ ಆಕಾಂಕ್ಷಾ ಶರ್ಮಾ, ಸಂಸ್ಥೆಯ ನಿರ್ದೇಶಕ ಶಶಿಧರ ಕೋಸಂಬೆ, ಜಗನ್ನಾಥ ನಾಗೂರು, ಸೋಮನಾಥ ಮಾಮಾ ಗೋರ್ಟಾ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯರಾದ ರಜನಿ ನರಸಿಂಹ ರಾವ್, ಬಸವರಾಜ ಇದ್ದರು.

ಸಂಯೋಜಕಿ ಸುಪ್ರೀಯಾ ಪಾಟೀಲ ನಿರೂಪಿಸಿದರು. ಜಯಲಕ್ಷ್ಮೀ ವಂದಿಸಿದರು.