
ಕಲಬುರಗಿ,ಆ.14-ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಇಂದು ನಗರದ ಜೇವರ್ಗಿ ರಸ್ತೆಯ ಎನ್.ಜಿ.ಓ. ಕಾಲೋನಿ ನಿವಾಸಿಯಾಗಿರುವ ಸ್ವಾತಂತ್ರ್ಯ ಹೋರಾಟಗಾರ ರಾಮಾಚಾರ್ಯ ನವಲಿ (95) ಅವರ ಮನೆಗೆ ಅಧಿಕಾರಿಗಳೊಂದಿಗೆ ತೆರಳಿದ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ನವಲಿ ಅವರಿಗೆ ಹೂವಿನ ಹಾರ ಹಾಕಿ, ಫಲ-ತಾಂಬೂಲ ನೀಡಿ ಜಿಲ್ಲಾಡಳಿತದಿಂದ ಗೌರವ ಸಲ್ಲಿಸಿದರು.
ಸ್ವಾತಂತ್ರ್ಯ ಹೋರಾಟಗಾರ ರಾಮಾಚಾರ್ಯ ನವಲಿ ಅವರು ಶಿಕ್ಷಕ-ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.
ಪ್ರಾಥಮಿಕ ಶಿಕ್ಷಣ ಗಂಗಾವತಿಯಲ್ಲಿ, ಪ್ರೌಢ ಶಿಕ್ಷಣ ಕಲಬುರಗಿಯಲ್ಲಿ, ಬಿ.ಎ ಮತ್ತು ಎಂ.ಎ.ಪದವಿಯನ್ನು ಹೈದ್ರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಹಾಗೂ ಎಂ.ಎಡ್ ಪದವಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿ ವಂದೆ ಮಾತರಂ ಮುಷ್ಕರದಲ್ಲಿ ಭಾಗಿಯಾಗಿದ್ದ ಇವರು ಮುಂದೆ ಸ್ವಾತಂತ್ರ್ಯ ಹೋರಾಟ ಮತ್ತು ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿಯೂ ಸಕ್ರಿಯವಾಗಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಕಲಬುರಗಿ ತಹಶೀಲ್ದಾರ ನಾಗಮ್ಮ ಕಟ್ಟಿಮನಿ, ಡಿ.ಸಿ.ಕಚೇರಿಯ ಶಿಷ್ಟಾಚಾರ ತಹಶೀಲ್ದಾರ ನಿಸಾರ್ ಅಹಮದ್ ಇದ್ದರು.