ಸ್ವಾತಂತ್ರ್ಯ ಮಹೋತ್ಸವ: ವೈವಿದ್ಯಮಯ ಅರ್ಥಪೂರ್ಣ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.15:- ಸ್ವಾತಂತ್ರ್ಯಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ವಿವಿಧ ಶೀರ್ಷಿಕೆಯಡಿ ಅರ್ಥಪೂರ್ಣ ಕಾರ್ಯಕ್ರಮಗಳು ನಗರದಲ್ಲಿಂದು ನಡೆಯಿತು.
ನಗರದ ಚಾಮರಾಜೇಶ್ವರ ದೇವಾಲಯದ ಬಳಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದಬಿ.ಎಸ್. ಭಾರತಿ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ, ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಸ್.ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಬಿ.ಆರ್.ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕರಾದ ದೀಪಾ. ಜೆ. ಕಂಟ್ರಾಕ್ಟರ್ ಅವರ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಸ್ವಾತಂತ್ರ್ಯ ಮಹೋತ್ಸವದ ಹಿನ್ನೆಲೆಯಲ್ಲಿರಾಷ್ಟ್ರಧ್ವಜ ಮತ್ತುರಾಷ್ಟ್ರಗೀತೆ ಶೀರ್ಷಿಕೆಯಡಿ ಇದರ ಮಹತ್ವದ ಬಗ್ಗೆ ತಿಳಿಸಿಕೊಡುವ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರಧ್ವಜ ಪ್ರದರ್ಶಿಸಲಾಯಿತು. ಇದೇ ವೇಳೆ ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಲಾಯಿತು.
ಪಂಚ ಪ್ರಾಣ ಶೀರ್ಷಿಕಯಡಿ ಮಣ್ಣಿನ ಹಣತೆಯನ್ನು ಗಣ್ಯರು ಹಚ್ಚಿದರು. ಹಣತೆಯನ್ನು ಕೈಯಲ್ಲಿ ಹಿಡಿದು ಸ್ವಾತಂತ್ರ್ಯ ಮಹೋತ್ಸವದ ಮಹತ್ವ ಸಾರಿದರು.
ಬಳಿಕ ಸ್ವಾತಂತ್ರ್ಯ ನಡಿಗೆಗೆ ಚಾಲನೆ ನೀಡಲಾಯಿತು. ಗಣ್ಯರು, ಅಧಿಕಾರಿಗಳು, ವಿದ್ಯಾರ್ಥಿಗಳೊಂದಿಗೆ ರಾಷ್ಟ್ರಧ್ವಜ ಹಿಡಿದು ಚಾಮರಾಜೇಶ್ವರ ದೇವಸ್ಥಾನ ಬಳಿಯಿಂದ ಹೊರಟು ಬಿ. ರಾಚಯ್ಯ ಜೋಡಿ ರಸ್ತೆ ಮೂಲಕ ಸಾಗಿ ಜಿಲ್ಲಾಡಳಿತ ಭವನದ ಆವರಣ ತಲುಪಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 75 ಗಿಡಗಳನ್ನು ನೆಡುವ ವಸುದಾನಂದ ಕಾರ್ಯಕ್ರಮ ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆಯಿತು. ಗಣ್ಯರು, ಅಧಿಕಾರಿಗಳು ಜಿಲ್ಲಾಡಳಿತ ಭವನದ ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರೆರೆದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅರ್ಥಪೂರ್ಣವಾಗಿ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಘನತೆಯ ಬಗ್ಗೆ ವಿಶೇಷವಾಗಿ ಮಕ್ಕಳಿಗೆ ತಿಳಿಸಿಕೊಡಲಾಗಿದೆ. ಪಂಚ ಪ್ರಾಣ ಶೀರ್ಷಿಕೆ ಕಾರ್ಯಕ್ರಮದಡಿ ಮಣ್ಣಿನ ಹಣತೆ ಹಚ್ಚುವ ಮೂಲಕ ಸ್ವಾತಂತ್ರ್ಯ ದೀಪ ಎಲ್ಲಾ ಕಡೆ ಬೆಳಗಲಿ ಎಂಬುದು ಉದ್ದೇಶವಾಗಿದೆ ಎಂದರು.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 75 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ. ಸ್ವಾತಂತ್ರ್ಯ ನಡಿಗೆಯಲ್ಲಿ ನ್ಯಾಯಾಧೀಶರು, ಅಧಿಕಾರಿಗಳು, ವಿದ್ಯಾರ್ಥಿಗಳು ಎಲ್ಲರು ಪಾಲ್ಗೊಂಡಿರುವುದು ಹರ್ಷದ ಸಂಗತಿಯಾಗಿದೆ. ಹರ್ ಘರ್ ತಿರಂಗಾ ಅಭಿಯಾನವನನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪ್ರತೀ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಮೂಲಕ ಗೌರವ ಸಲ್ಲಿಸಬೇಕು. ಪ್ಲಾಸ್ಟಿಕ್ ಧ್ವಜ ಬಳಕೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಮನವಿ ಮಾಡಿದರು.
ತಹಶೀಲ್ದಾರ್ ಬಸವರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ರಾಮಚಂದ್ರರಾಜೇ ಅರಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಗುರುಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.