ಸ್ವಾತಂತ್ರ್ಯ ದಿನಾಚರಣೆಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಣ ಸಂಸ್ಥೆಗೆ ಪ್ರಥಮ ಬಹುಮಾನ

ಅಥಣಿ : ಆ.18:ಚಿಕ್ಕ ಮಕ್ಕಳಲ್ಲಿ ದೇಶಭಕ್ತಿ ಜಾಗೃತವಾದರೆ ಸದೃಢ ಹಾಗೂ ಸುಸಂಸ್ಕೃತ ರಾಷ್ಟ್ರ ಕಟ್ಟಲು ಸಾಧ್ಯ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅವರು ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯವಾಗಿ ತಾಲೂಕಾ ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪಥಸಂಚಲನ ವಿಭಾಗದ ಬಹುಮಾನಗಳನ್ನ ವಿತರಿಸಿ ಮಾತನಾಡಿದರು. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಅತ್ಯಂತ ಶಿಸ್ತಿನಿಂದ ಪ್ರದರ್ಶನ ಮಾಡಿದ ಪತಸಂಚಲನ ಹಾಗೂ ದೇಶಪ್ರೇಮವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಜವಾಗಲೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ನಮ್ಮ ದೇಶ, ನಮ್ಮ ಬಾವುಟ, ಭಾಷೆ ನೆಲ ಜಲ ಸಂಸ್ಕೃತಿಯ ಬಗ್ಗೆ ನಮ್ಮ ವಿದ್ಯಾರ್ಥಿಗಳಲ್ಲಿರುವ ಈ ಉತ್ಸಹ ಇನ್ನುಳಿದ ಎಲ್ಲ ಮಕ್ಕಳಿಗೆ ಸ್ಪೂರ್ತಿ ಆಗಬೇಕು ಎಂದರು. ಸ್ಪರ್ಧೆಯಲ್ಲಿ ಬಹುಮಾನ ಮುಖ್ಯವಲ್ಲ, ಇಂತಹ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮನೋಭಾವ ಮತ್ತು ದೇಶಭಕ್ತಿ ಮಹತ್ತರವಾದದ್ದು, ದೇಶ ಭಕ್ತಿಗೀತೆಯ ರೂಪಕಗಳು ಮತ್ತು ಜಾನಪದ ಶೈಲಿಯ ನೃತ್ಯ ರೂಪಕ ಪ್ರದರ್ಶಿಸುವ ಮೂಲಕ ಮೂಢನಂಬಿಕೆಯ ವಿರುದ್ಧ ಹೋರಾಟದ ಪ್ರದರ್ಶನ ಮಾಡಿದ ಆದರ್ಶ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಕಲಾ ಪ್ರದರ್ಶನ, ಬಣಜವಾಡ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಆಕರ್ಷಕ ಮಲ್ಲಕಂಬ ಪ್ರದರ್ಶನ, ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸರ್ಜಿಕಲ್ ಸ್ಟ್ರೈಕ್ ದಾಳಿ ಪ್ರದರ್ಶನ ಸೇರಿದಂತೆ ಅನೇಕ ಶಾಲೆಯ ಮಕ್ಕಳು ನೀಡಿದ ಉತ್ತಮ ಪ್ರದರ್ಶನ ನಿಜವಾಗಲೂ ಎಲ್ಲರೂ ಮೆಚ್ಚುವಂತಹದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ದೇಶಭಕ್ತಿ ಗೀತೆ ರೂಪಕದೊಂದಿಗೆ ಜಾನಪದ ಶೈಲಿಯ ಕಲಾ ನೃತ್ಯದ ಪ್ರದರ್ಶನ ಮೂಲಕ ದೇವದಾಸಿ ಪದ್ಧತಿಯ ಮೂಢನಂಬಿಕೆ ವಿರುದ್ಧ ಹೋರಾಟದ ಜನಜಾಗ್ರತಿ ಮೂಡಿಸಿದ ಆದರ್ಶ ಶಿಕ್ಷಣ ಸಂಸ್ಥೆಯ ಮಕ್ಕಳ ಕಲಾ ಪ್ರದರ್ಶನಕ್ಕೆ ತಾಲೂಕಾ ಆಡಳಿತದಿಂದ ಪ್ರಥಮ ಬಹುಮಾನ 7000 ರೂ/- ನಗದು ಮತ್ತು ಪ್ರಮಾಣ ಪತ್ರದೊಂದಿಗೆ ಪಾರಿತೋಷಕ ವಿತರಿಸಲಾಯಿತು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ತಾಲೂಕಾ ಆಡಳಿತದಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ತಾಲೂಕ ದಂಡಾಧಿಕಾರಿ ಬಿ ಎಸ್ ಕಡಕಬಾವಿ. ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೊರಟಗಿ, ಪುರಸಭಾ ಸದಸ್ಯ ರಾವಸಾಬ ಐಹೊಳೆ, ಆದರ್ಶ ಶಿಕ್ಷಣ ಸಂಸ್ಥೆಯ ನಿರ್ದೇಶಕ ವೈಭವ ಐಹೊಳಿ , ಆಡಳಿತ ಅಧಿಕಾರಿ ಸತೀಶ್ ಕುಲಕರ್ಣಿ, ಶಿಕ್ಷಕರಾದ ಮಹೇಶ ಮಾದರ, ಪವನ್ ಕುಮಾರ, ಸಂಗಪ್ಪ ದಾನ್ಸೂರ, ಶಶಿಕಲಾ ಕುರಣಿ, ಉಮಾಶ್ರೀ, ವೈಶಾಲಿ ಮೋರೆ, ಸುಮನ್ ಸಾಳಂಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.