ಸ್ವಾತಂತ್ರ್ಯ ಜವಾಬ್ದಾರಿಯ ಸಂಕೇತ

ಹುಳಿಯಾರು, ಆ. ೧೯- ಸ್ವಾತಂತ್ರ್ಯ ಎನ್ನುವುದು ಜವಾಬ್ದಾರಿಯೇ ಹೊರತು ಸ್ವೇಚ್ಛಾಚಾರವಲ್ಲ ಎಂದು ಹುಳಿಯಾರು ಪೋಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಧರ್ಮಾಂಜಿ ಪ್ರತಿಪಾದಿಸಿ, ಪ್ರತಿಯೊಬ್ಬ ಪ್ರಜೆಯೂ ತನ್ನ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದರೆ, ಆಗ ದೇಶದ ಅಭಿವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹುಳಿಯಾರು ಸಮೀಪದ ಯಗಚೀಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ೭೭ ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣಪ್ಪ ಮಾತನಾಡಿ, ಈಗ ಎಲ್ಲೆಲ್ಲೂ ದ್ವೇಷವನ್ನು ಬಿತ್ತಲಾಗುತ್ತಿದೆ, ಇದರಿಂದ ದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ನಾವೆಲ್ಲರೂ ಪ್ರೀತಿಯಿಂದ ಸಾಮರಸ್ಯ ಸಾಧಿಸಬೇಕು ಎಂದು ಹೇಳಿ, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ನಾವು ಕೈಜೋಡಿಸಬೇಕು ಎಂದರು.
ಮಾಧ್ಯಮದ ಮಹೇಶ್ ಮಾತನಾಡಿ, ಹಿರಿಯರು ತಂದು ಕೊಟ್ಟ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಂಡು ಹೋಗಬೇಕು ಎಂದರು.
ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಬಾಪು ಗಿರೀಶ್ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಆರ್.ಮನೋಹರ್ ಸ್ವರೂಪ್, ಗ್ರಾ.ಪಂ. ಸದಸ್ಯೆ ಆಫ್ರಿಕನ್ ಬಾನು ಮತ್ತು ಪೋಷಕ ಮಹಂತೇಶ್ ಮಕ್ಕಳಿಗೆ ನೋಟ್ ಬುಕ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪ್ರಸನ್ನ, ಮಾ.ಗ್ರಾ.ಸದಸ್ಯರಾದ ತ್ಯಾಗರಾಜು, ಮಾಜಿ ಎಸ್.ಡಿ.ಎಂ.ಸಿ. ಅಧ್ಯಕ್ಷರುಗಳಾದ ಎಂ.ರಾಮಯ್ಯ, ವೈ.ಎಂ.ನಾಗರಾಜು, ಆರ್.ಸದನಂದ್. ಯುವ ಮುಖಂಡ ಟಿ.ರಂಗಸ್ವಾಮಿ, ವೈ.ಕೆ.ತಿಪ್ಪೆಸ್ವಾಮಿ, ದಸ್ತ್‌ಗೀರ್, ವೈ.ಆರ್.ಧನಂಜಯ್, ಅಯೂಬ್, ಅಜಯ್, ಹಮೀದ್, ದಾದು, ರಾಧಾ, ಪೋಷಕರಾದ ಬಿ.ಲತಾ, ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.
ಹಾಲು ಉತ್ಪಾದಕರ ಸಹಕಾರ ಸಂಘದ ಸಿಇಓ ನಾಗಲಿಂಗಪ್ಪ ಸ್ವಾಗತಿಸಿದರು. ಶಿಕ್ಷಕರಾದ ಸಿದ್ಧಲಿಂಗಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. ಮು.ಶಿ.ಲತಾ ನಿರೂಪಿಸಿದರು. ಶಿಕ್ಷಕಿ ದುರ್ಗಮ್ಮ ವಂದಿಸಿದರು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.