ಸ್ವಾತಂತ್ರ್ಯ ಅಮೃತ ಮಹೋತ್ಸವ: ವಿದ್ಯಾರ್ಥಿಗಳಿಂದ ಜಾಥಾ

ಪಾವಗಡ, ಜು. ೨೭- ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪಾವಗಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಜಾಥಾ ನಡೆಸಿದರು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಂಶುಪಾಲರಾದ ಡಾ ಎನ್ ಶ್ರೀಧರ್, ಸ್ವಾತಂತ್ರ್ಯ ಬಂದು ೭೫ ವರ್ಷಗಳಾಗಿದ್ದು ಇಂದಿಗೂ ಸ್ವಾತಂತ್ರ್ಯ ಚಳವಳಿಯ ಇತಿಹಾಸ ತಿಳಿದಿಲ್ಲ. ೨೦೦ ವರ್ಷಗಳ ಹೋರಾಟ ಜನರಿಗೆ ಮತ್ತೊಮ್ಮೆ ತಿಳಿಸುವ ಮೂಲಕ ಸ್ವಾತಂತ್ರ್ಯ ಚಳವಳಿಯ ಹೆಮ್ಮೆ ಹಾಗೂ ಉದ್ದೇಶ ಮತ್ತು ಜವಾಬ್ದಾರಿಗಳನ್ನು ನೆನಪಿಸಲು ಇದು ಸಕಾಲವಾಗಿದೆ ಎಂದರು.
ಸ್ವಾತಂತ್ರ್ಯ ಪಡೆಯಲು ಸಾವಿರಾರು ಜನರು ಪ್ರಾಣ ತ್ಯಾಗ ಮಾಡಿದ್ದಾರೆ. ಜೈಲು ವಾಸ ಅನುಭವಿಸಿದ್ದಾರೆ. ಮನೆ ಮಠ ಬಿಟ್ಟು ಹೋರಾಟದಲ್ಲೇ ಮೃತಪಟ್ಟಿದ್ದಾರೆ. ಅಂತಹವರ ಹೋರಾಟದ ಫಲವೇ ಇಂದು ನಾವು ೭೫ನೇ ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ ಅಚರಿಸುವಂತಾಗಿದೆ. ಭಾರತತೀಯರಾದ ನಮಗೆ ದೇಶ ಪ್ರೇಮ ಎಲ್ಲರಲ್ಲೂ ಮೂಡಬೇಕು. ದೇಶದ ಬಗ್ಗೆ ಭಕ್ತಿ ಇದ್ದಾಗ ಭಾರತ ಸಮೃದ್ಧಿಯಾಗಿರುತ್ತದೆ ಎಂದರು.
ಭಾರತ ಸ್ವಾತಂತ್ರ್ಯದ ಬಗ್ಗೆ ಹೆಮ್ಮೆಯ ಘೋಷಣೆಗಳನ್ನು ಕೂಗುವ ಮೂಲಕ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಜಾಥಾದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್ ತಂಡಗಳು, ಉಪಸ್ಯಾಕರು ಭಾಗವಹಿಸಿದ್ದರು.