ಸ್ವಾತಂತ್ರ್ಯೋತ್ಸವ ಪೂರ್ವಭಾವಿ ಸಭೆಗೆ ಅಧಿಕಾರಿಗಳ ಗೈರು: ನೋಟಿಸ್ ಜಾರಿಗೆ ಸೂಚನೆ

ಕುಣಿಗಲ್, ಆ. ೧- ಸ್ವಾತಂತ್ರ್ಯದ ೭೫ರ ಅಮೃತ ಮಹೋತ್ಸವ ಪೂರ್ವಭಾವಿ ಸಭೆಗೆ ಇಲಾಖೆ ಮುಖ್ಯಸ್ಥರು ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಶಾಸಕ ಡಾ. ಎಚ್.ಡಿ. ರಂಗನಾಥ್ ಅವರು ಗರಂ ಆಗಿ ನೋಟಿಸ್ ಜಾರಿ ಮಾಡುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿದರು.
ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತವು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಮಹಾಬಲೇಶ್ವರ ಅಧ್ಯಕ್ಷತೆಯಲ್ಲಿ ೭೫ ರ ಸ್ವಾತಂತ್ರ್ಯ ಅಮೃತ ಮಹೋತ್ಸವ ಪೂರ್ವಭಾವಿ ಸಭೆಗೆ ಅನೇಕ ಇಲಾಖೆಯ ಮುಖ್ಯಸ್ಥರು ಗೈರು ಹಾಜರಾಗಿದ್ದನ್ನು ಗಮನಿಸಿದ ಶಾಸಕ ಎಚ್.ಡಿ. ರಂಗನಾಥ್ ತಾಲ್ಲೂಕಿನ ಅಧಿಕಾರಿಗಳು ೭೫ರ ಸ್ವಾತಂತ್ರ ಪೂರ್ವಭಾವಿ ಸಭೆಗೆ ಗೈರು ಹಾಜರಾಗಿದ್ದನ್ನು ಖಂಡಿಸಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಹಶೀಲ್ದಾರರಿಗೆ ಸೂಚಿಸಿದರು.
ಅ. ೧೫ ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನದಂದು ತಾಲ್ಲೂಕಿನ ಎಲ್ಲ ಸ್ವಾತಂತ್ರ್ಯ ಹೋರಾಟಗಾರರನ್ನು ಕರೆತಂದು ಸನ್ಮಾನಿಸುವುದರೊಂದಿಗೆ ಪ್ರತಿ ಗ್ರಾಮ ಪಂಚಾಯಿತಿಗೆ ೨೫೦ ರಂತೆ ಪುರಸಭೆಯಲ್ಲಿ ೫೦೦೦ ರಾಷ್ಟ್ರೀಯ ಬಾವುಟಗಳನ್ನು ವಿತರಿಸಿ ಇಲಾಖೆ ಕಚೇರಿಗಳು, ಹಾಸ್ಟೆಲ್‌ಗಳು, ಆಸ್ಪತ್ರೆಗಳು, ಅಂಗನವಾಡಿ ಕಟ್ಟಡಗಳು, ಶಾಲಾ ಕಾಲೇಜು ಸೇರಿದಂತೆ ಪ್ರತಿ ಮನೆ ಮನೆಯ ಮೇಲು ಆಗಸ್ಟ್ ೧೩ ರಿಂದ ೧೫ ರವರೆಗೆ ನಿರಂತರವಾಗಿ “ಹರ್ ಘರ್ ತಿರಂಗ “ಅಭಿಯಾನವನ್ನು ನಡೆಸುವಂತೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರವು ತೀರ್ಮಾನ ಕೈಗೊಂಡಿರುವುದರಿಂದ ವೈಭವೋಪೇತವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನವನ್ನು ಆಚರಿಸಬೇಕು ಎಂದರು.
ಎಲ್ಲಾ ಸರ್ಕಾರಿ ಕಚೇರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಸೇರಿದಂತೆ ೧೫ ರ ಸ್ವಾತಂತ್ರ್ಯ ದಿನದಂದು ಪೊಲೀಸ್ ಕವಾಯಿತು, ಹೋಂ ಗಾರ್ಡ್ಸ್, ಎನ್ ಸಿ ಸಿ ವಿದ್ಯಾರ್ಥಿಗಳು, ೨೫೦೦ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಸುವಂತೆ ಸೂಚಿಸಿದರು.
೩೬ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ವ್ಯವಸ್ಥಿತವಾಗಿ ಆಚರಿಸಬೇಕು ಎಂದು ತಿಳಿಸಿದರು.
ಸಭೆಗೆ ಪೊಲೀಸ್ ಮುಖ್ಯಸ್ಥರು ಬಾರದೇ ಪಿ.ಎಸ್.ಐ ಲಕ್ಷ್ಮಣ್ ಎಂಬುವರನ್ನು ಕಳುಹಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಿಮ್ಮ ಕಾರ್ಯ ನಡೆ ಬಗ್ಗೆ ರೈತರು ಸಾರ್ವಜನಿಕರು ಒಳ್ಳೆಯ ಅಭಿಪ್ರಾಯ ನೀಡುವುದಿಲ್ಲ. ಕೂಡಲೇ ಸರಿಪಡಿಸಿಕೊಳ್ಳುವಂತೆ ಸೂಚಿಸಿ ನಿಮ್ಮ ಮುಖ್ಯಸ್ಥರಿಗೆ ಮುಂದಿನ ಸಭೆಗೆ ಭಾಗವಹಿಸಬೇಕು ಎಂದು ತಿಳಿಸುವಂತೆ ತಾಕೀತು ಮಾಡಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ, ಪುರಸಭಾಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷರಾದ ತಬಸ್ಸುಮ್, ಮುಖ್ಯಾಧಿಕಾರಿ ಶಿವಪ್ರಸಾದ್, ಬಿ.ಸಿ.ಎಂ. ಅಧಿಕಾರಿ ಪಾರ್ವತಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.