ಸ್ವಾತಂತ್ರ್ಯೋತ್ಸವ ದಿನಾಚರಣೆ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿಗಳ ಸೂಚನೆ

ವಿಜಯಪುರ, ಆ.3-ಆಗಸ್ಟ್ 15ರಂದು ಆಚರಿಸಲ್ಪಡುವ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಗಸ್ಟ್ 2ರಂದು ಸಂಜೆ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ರಾಷ್ಟ್ರೀಯ ಹಬ್ಬದಲ್ಲಿ ತನುಮನದಿಂದ ಭಾಗಿಯಾಗಬೇಕು ಎಂದು ಜಿಲ್ಲೆಯ ಸಮಸ್ತ ಸಾರ್ವಜನಿಕರಲ್ಲಿ ಕೋರಿದ ಜಿಲ್ಲಾಧಿಕಾರಿಗಳು, ಅಂದು ಬೆಳಗ್ಗೆ 7.45ರೊಳಗೆ ಎಲ್ಲಾ ಸರ್ಕಾರಿ, ಅರೇ ಸರ್ಕಾರಿ ಕಚೇರಿಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ಧ್ವಜಾರೋಹಣ ನಡೆಸಬೇಕು. ಬಳಿಕ 8.30ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಆವರಣಕ್ಕೆ ಆಗಮಿಸಬೇಕು. ಕ್ರೀಡಾಂಗಣದಲ್ಲಿ ಬೆಳಗ್ಗೆ ಸರಿಯಾಗಿ 9 ಗಂಟೆಗೆ ಆರಂಭವಾಗುವ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು.
ಆಯಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯು ಕಾರ್ಯ ಹಂಚಿಕೆಯಂತೆ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಇದೆ ವೇಳೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದ ಸ್ಥಳದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಂತಿಮವಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣವನ್ನು ಸ್ವಾತಂತ್ರ್ಯೋತ್ಸವದ ಸಮಾರಂಭಕ್ಕೆ ಸಾರ್ವಜನಿಕರ ಅಭಿಪ್ರಾಯದಂತೆ ಆಯ್ಕೆ ಮಾಡಲಾಯಿತು.
ಸ್ವಾತಂತ್ರ್ಯೋತ್ಸವ ದಿನದಂದು ನಗರದಲ್ಲಿ ಹಬ್ಬದ ವಾತಾವರಣವಿರಬೇಕು. ನಗರದಲ್ಲಿನ ಎಲ್ಲಾ ಪಾರಂಪರಿಕ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಬೇಕು. ಎಲ್ಲಾ ಸರ್ಕಾರಿ ಕಚೇರಿಗಳ ಮುಖ್ಯಸ್ಥರು ಸಹ ತಮ್ಮ ತಮ್ಮ ಕಚೇರಿಗಳನ್ನು ತಳಿರು-ತೋರಣ, ರಂಗೋಲಿ, ವಿದ್ಯುದ್ವೀಪಗಳಿಂದ ಅಲಂಕರಿಸಬೇಕು. ನಗರದ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರದ ವ್ಯವಸ್ಥೆ ಮಾಡಬೇಕು. ಕ್ರೀಡಾಂಗಣವನ್ನು ಸುಣ್ಣ-ಬಣ್ಣದ ವ್ಯವಸ್ಥೆಯೊಂದಿಗೆ ಸಿದ್ಧಪಡಿಸಬೇಕು. ಕ್ರೀಡಾಂಗಣದ ಸುತ್ತಲಿನ ಪರಿಸರವನ್ನು ಶುಚಿಯಾಗಿಡಬೇಕು. ಕಾಂಪೌಂಡ್ ಮತ್ತು ಸುತ್ತಲಿನ ಗೋಡೆಗಳನ್ನು ಅಲಂಕಾರಗೊಳಿಸಬೇಕು. ಶೌಚಾಲಯಗಳನ್ನು ಸುಸ್ಥಿತಿಯಲ್ಲಿಡಬೇಕು. ಕಾರ್ಯಕ್ರಮ ದಿನದಂದು ಕುಡಿಯುವ ನೀರು ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯದ ವ್ಯವಸ್ಥೆ ಮಾಡಬೇಕು. ವೇದಿಕೆ ಸಿದ್ಧತೆ, ಗಣ್ಯರು, ಪತ್ರಕರ್ತರು, ಸಾರ್ವಜನಿಕರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ, ಧ್ವನಿವರ್ಧಕ, ಗ್ರೀನ್ ರೂಮ್ ಸೇರಿದಂತೆ ಎಲ್ಲವೂ ಸುವ್ಯಸ್ಥಿತ ರೀತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಗಣ್ಯರಿಗೆ ವಿತರಿಸಬೇಕು. ಯಾವುದೇ ಲೋಪದೋಷಗಳು ಆಗದಂತೆ ಕಾರ್ಯಕ್ರಮಕ್ಕೆ ನಡೆಯುವಂತಾಗಬೇಕು. ಸಾರಿಗೆ ಮತ್ತು ವಿದ್ಯುತ್ ಪೂರೈಕೆ ವ್ಯವಸ್ಥೆ ಸರಿಯಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತೆ ವಹಿಸಬೇಕು., ಅಗತ್ಯವಿರುವಷ್ಟು ವೈದ್ಯಕೀಯ ಸಿಬ್ಬಂದಿ ಮತ್ತು ಅಂಬ್ಯುಲೆನ್ಸ್ ವ್ಯವಸ್ಥೆ ಇರಬೇಕು. ಅಂದು ಕ್ರೀಡಾಂಗಣದ ಸುತ್ತಲು ಸುಗಮ ಸಂಚಾರಕ್ಕೆ ವ್ಯವಸ್ಥೆ ಇರುವ ಹಾಗೆ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ವಿವಿಧ ತಂಡಗಳ ರಚನೆ: ಕ್ರೀಡಾಂಗಣದ ವ್ಯವಸ್ಥೆ, ವೇದಿಕೆ ಮತ್ತು ಕಾರ್ಯಕ್ರಮ ನಿರ್ವಹಣೆ, ಪಥ ಸಂಚಲನ ಹಾಗೂ ಧ್ವಜದ ವ್ಯವಸ್ಥೆ, ಆರೋಗ್ಯ ಮತ್ತು ಮುಂಜಾಗ್ರತಾ ಕ್ರಮಗಳು, ಸ್ವಚ್ಛತೆ, ನಗರಾಲಂಕಾರ, ಅಲ್ಪೋಪಹಾರ ಸೇರಿದಂತೆ ನಾನಾ ವ್ಯವಸ್ಥೆಗಳಿಗಾಗಿ ಇದೆ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು.
ಸಭೆಗೆ ನಾನಾ ಸಲಹೆ: ಯುದ್ಧದಲ್ಲಿ ಮತ್ತು ಪೊಲೀಸ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕುಟುಂಬದವರನ್ನು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದ ಜಿಲ್ಲೆಯ ಸಾಧಕರನ್ನು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸುವ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ಅಂದು ತಮ್ಮ ಕಚೇರಿಗಳನ್ನು ಅಲಂಕಾರಗೊಳಿಸಬೇಕು ಎಂಬುದು ಸೇರಿದಂತೆ ಸಭೆಯಲ್ಲಿದ್ದ ಗಣ್ಯರು ಸಭೆಗೆ ನಾನಾ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ಧಿ, ಮಗಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ್ ಹಾಗೂ ಇನ್ನೀತರ ಅಧಿಕಾರಿಗಳು ಮತ್ತು ನಗರದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಭೀಮರಾಯ ಜಿಗಜಿಣಗಿ, ಅಡಿವೆಪ್ಪ ಸಾಲಗಲ್, ಎಸ್.ಎಸ್.ಕಲ್ಲೂರ, ಗಿರೀಶ ಕುಲಕರ್ಣಿ, ಶಿವಾಜಿ ಮೋರೆ, ಬಿ.ಎಂ.ಫಾರೂಕಿ, ಎಂ.ಸಿ.ಮುಲ್ಲಾ ಸೇರಿದಂತೆ ಇತರರು ಇದ್ದರು.