
ನವದೆಹಲಿ, ಆ. ೧೩ -ದೇಶದ ೭೬ ನೇ ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ರಾಜಧಾನಿ ದೆಹಲಿಯಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಎಲ್ಲೆಡೆ ಭದ್ರತೆಯನ್ನು ಬಿಗಿಗೊಳಿಸಿ ಹದ್ದಿನ ಕಣ್ಣಿಡಲಾಗಿದೆ.
ಸ್ವಾತಂತ್ರ್ಯೋತ್ಸವ ದಿನವಾದ ಆ. ೧೫ ರಂದು ಪ್ರಧಾನಿ ನರೇಂದ್ರಮೋದಿ ಅವರು ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಕೆಂಪುಕೋಟೆ ಸೇರಿದಂತೆ ದೆಹಲಿಯ ಎಲ್ಲೆಡೆ ಬಿಗಿಭದ್ರತೆಯನ್ನು ಕೈಗೊಳ್ಳಲಾಗಿದೆ. ಇಂಡಿಯಾಗೇಟ್ ರಾಜ್‌ಘಾಟ್ ಸೇರಿದಂತೆ ದೆಹಲಿಯ ಎಲ್ಲ ಪ್ರಮುಖ ಸ್ಥಳಗಳಲ್ಲೂ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ ಆಗಲೇ ಹಾಗೆಯೇ ನಿಷೇಧಾಜ್ಞೆಯನ್ನು ಹಲವೆಡೆ ಜಾರಿ ಮಾಡಲಾಗಿದೆ ದೆಹಲಿ ಪ್ರವೇಶಿಸುವ ವಾಹನಗಳ ತಪಾಸಣೆಯನ್ನೂ ಮಾಡಲಾಗುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರ ಗಸ್ತನ್ನು ಚುರುಕುಗೊಳಿಸಲಾಗಿದ್ದು, ಎಲ್ಲೆಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಅನುಮಾನಾಸ್ಪದ ವ್ಯಕ್ತಿಗಳ ಮಲೆ ನಿಗಾ ವಹಿಸಲಾಗಿದೆ.
ಪ್ರತಿ ಭಾರಿಯ ಸ್ವಾತಂತ್ರ್ಯ ದಿನಾಚಾರಣೆಯ ಸಮಯದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಬಾರಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಅದರಂತೆ ಈ ಬಾರಿಯೂ ಹೆಚ್ಚು ಬಿಗಿಭದ್ರತೆ ಒದಗಿಸಲಾಗಿದೆ. ಹೀಗಾಗಿ ಹದ್ದಿನ ಕಣ್ಣಿಡಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಪ್ರತಿ ಬಾರಿ ಉಗ್ರರು ಸಂಚು ರೂಪಿಸಿ ದೇಶದ ಭದ್ರತೆಗೆ ಧಕ್ಕೆ ತರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದಂತೆ ಪೊಲೀಸರು, ಸೇನೆ ಸೇರಿದಂತೆ ವಿವಿಧ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ.
ಶಸಸ್ತ್ರ ಪಡೆಗಳ ತಾಲೀಮು
ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ೨ ದಿನಬಾಕಿ ಉಳಿದಿದ್ದು, ಕೆಂಪುಕೋಟೆಯ ಆವರಣದಲ್ಲಿ ಭಾರತೀಯ ಶಸಸ್ತ್ರ ಪಡೆಗಳು ಇಂದು ತಾಲೀಮು ನಡೆಸಿದವರು ಭಾರತೀಯ ಶಸಸ್ತ್ರ ಪಡೆಗಳ ಮಿಲಿಟರಿ ಬ್ಯಾಂಡ್, ನೌಕಾ ಮತ್ತು ವಾಯುಪಡೆ ಘಟಕಗಳೂ ಸೇರಿದಂತೆ ವಿವಿಧ ತುಕಡಿಗಳು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಆಕರ್ಷಕ ಕವಾಯತ್ತಿನಲ್ಲಿ ಭಾಗಿಯಾಗಲಿದ್ದು, ಈ ಪಡೆಗಳು ಭಾನುವಾರವಾದ ಇಂದು ಪೂರ್ವಾಭ್ಯಾಸ ನಡೆಸಿದವು.
ಹರ್ ಘರ್ ತಿರಂಗಾ:ಪ್ರಧಾನಿ ಕರೆ
ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಂಡು ಸಾಮಾಜಿಕ ಮಾಧ್ಯಮಗಳ ಖಾತೆಗಳ ಪ್ರೊಫೈಲ್ ಚಿತ್ರವನ್ನು ತ್ರಿವರ್ಣ ಧ್ವಜವಾಗಿ ಬದಲಾಯಿಸಲು ಪ್ರಧಾನಿ ಮೋದಿ ಅವರು ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿಯವರು ಹರ್ ಘರ್ ತಿರಂಗಾ ಅಭಿಯಾನವು ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವಕ್ಕೆ ಹೊಸ ಚೈತನ್ಯ ನೀಡಲಿದೆ. ದೇಶವಾಸಿಗಳು ಈ ಅಭಿಯಾನವನ್ನು ಈ ವರ್ಷ ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. ಆ. ೧೩ ರಿಂದ೧೫ರ ನಡುವೆ ದೇಶದ ಹೆಮ್ಮೆಯ ಸಂಕೇತವಾದ ರಾಷ್ಟ್ರಧ್ವಜವನ್ನು ಹಾರಿಸಿ ನಿಮ್ಮ ಫೋಟೊಗಳನ್ನು ಹರ್ ಘರ್ ತಿರಂಗಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆಯೂ ಪ್ರಧಾನಿ ನರೇದ್ರ ಮೋದಿ ಮನವಿ ಮಾಡಿದ್ದಾರೆ.
ಈ ಮೂಲಕ ದೇಶ ಮತ್ತು ನಮ್ಮ ನಡುವಿನ ಬಾಂಧವ್ಯ ಮತ್ತಷ್ಟು ಗಾಢವಾಗಲಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲೂ ಬಿಗಿ ಭದ್ರತೆ
ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಾಳೆ ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ ಹಾಗೆಯೇ ಎಲ್ಲ ಜಿಲ್ಲೆಗಳಲ್ಲೂ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ರಾಷ್ಟ್ರಧ್ವಜಾರೋಹಣ ನೆರವೇರಿಸುವರು.
ಬೆಂಗಳೂರು ನಗರದ ಎಲ್ಲಾ ವಿಭಾಗಗಳಿಂದ ೯-ಡಿಸಿಪಿ, ೧೫-ಎಸಿಪಿ, ೪೩-ಪಿಐ, ೧೧೦-ಪಿಎಸ್‌ಐ, ಐಪಿಎಸ್‌ಐ, ೭೨-ಎಎಸ್‌ಐ, ೫೫೪-ಹೆಚ್ ಸಿ,ಪಿಸಿ, ೭೭-ಮಹಿಳಾ ಸಿಬ್ಬಂದಿಗಳೊಂದಿಗೆ ೧೫೭-ಸಾದಾ ಉಡುಪಿನ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು ೫೪ ಜನ ಕ್ಯಾಮೆರಾ ಸಿಬ್ಬಂದಿಗಳನ್ನು ಬಂದೋಬಸ್ತ್ ಕಣಕ್ಕೆ ನಿಯೋಜಿಸಲಾಗಿದೆ.
ಸಂಚಾರ ನಿರ್ವಹಣೆಗಾಗಿ ೩-ಡಿಸಿಪಿ, ೬-ಎಸಿಪಿ, ೨೨-ಪಿಐ, ೩೧-ಪಿಎಸ್‌ಐ, ೧೨೪-ಎಎಸ್‌ಐ, ೫೦೭-ಹೆಚ್ ಸಿ, ಪಿಸಿ. ಒಟ್ಟಾರೆ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಪ್ರಯುಕ್ತ ಒಟ್ಟು ೧೭೮೬ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಇದಲ್ಲದೇ ಮೈದಾನದ ಬಂದೋಬಸ್ತ್ ಕರ್ತವ್ಯಕ್ಕೆ ೧೦-ಕೆ.ಎಸ್.ಆರ್.ಪಿ, ಸಿ.ಎ.ಆರ್. ತುಕಡಿಗಳನ್ನು, ೨- ಅಗ್ನಿಶಾಮಕ ವಾಹನಗಳು, ೨-ಆಂಬುಲೆನ್ಸ್ ವಾಹನಗಳು, ೪-ಖಾಲಿ ವಾಹನಗಳು, ೧-ಕ್ಷಿಪ್ರ ಕಾರ್ಯಾಚರಣೆ ಪಡೆ (ಕ್ಯೂಆರ್.ಟಿ) ೧-ಡಿ-ಸ್ಪಾಟ್, ೧-ಆರ್.ಐ.ವಿ.ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಒಂದು ಗರುಡ ಫೋರ್ಸ್, ಮೈದಾನದ ಸುತ್ತ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ನಿಗಾವಹಿಸಲು ೧೦೦ ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಹಾಕಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದರು.