ಸ್ವಾತಂತ್ರ್ಯದ ಶತಾಬ್ದಿ ವರ್ಷದಲ್ಲಿ ಸಮಾನತೆ,ಹಾಗೂ ಭ್ರಷ್ಟಾಚಾರ ಮುಕ್ತ ಭಾರತವಾಗಲಿ : ಖೂಬಾ

ಕಲಬುರಗಿ:ನ.6:ಭಾರತ ಸ್ವಾತಂತ್ರ್ಯದ ಶತಾಬ್ದಿ ವರ್ಷಕ್ಕೆ ಭಾರತವು ಸಮಾನತೆಯ ರಾಷ್ಟ್ರವಾಗಿ ಭ್ರಷ್ಟಾಚಾರ ಮುಕ್ತ ಭಾರತವಾಗಿ ಉದಯಿಸಿ ವಿಶ್ವ ಗುರುವಾಗುವಂತೆ ಒಟ್ಟಾಗಿ ಶ್ರಮಿಸೋಣ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವರಾದ ಶ್ರೀ ಭಗವಂತ ಖೂಬಾ ಹೇಳಿದರು.

ಕಲಬುರಗಿ ಆಕಾಶವಾಣಿ ಕೇಂದ್ರದ ಸಂಗೀತ ಸ್ಟುಡಿಯೋದಲ್ಲಿ ನವೆಂಬರ್ 6ರಂದು ಆಯೋಜಿಸಿದ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ “ ಸ್ವಾತಂತ್ರ್ಯದ ಅಮೃತ ಹೆಜ್ಜೆಗಳು “ ಸರಣಿ ಕಾರ್ಯಕ್ರಮಕ್ಕೆ ನೇರ ಪ್ರಸಾರದಲ್ಲಿ ಚಾಲನೆ ನೀಡಿ ಮುಖ್ಯ ಭಾಷಣ ಮಾಡಿದರು. ಸ್ವಾತಂತ್ರ್ಯದ 100ನೇ ವರ್ಷ ಆಚರಿಸುವ ಮುನ್ನ ಎಲ್ಲರೂ ಸೇವಾ ಮನೋಭಾವದಿಂದ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡು ಶ್ರೇಷ್ಠ ಭಾರತ ನಿರ್ಮಾಣ ಮಾಡುವ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ತಮ್ಮ ಮುನೋಟ ಸಂಕಲ್ಪ ತಿಳಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಸರ್ಕಾರ ಬಂದನಂತರ ದೇಶದ ಆಡಳಿತ ವ್ಯವಸ್ಥೆಯ ಜೊತೆಗೆ ಎಲ್ಲ ಆಯಾಮಗಳಲ್ಲಿ ದೇಶವು ಅಭಿವೃದ್ಧಿಯಾಗುತ್ತಿದೆ. ನವ ಮನ್ವಂತರಕ್ಕೆ ನಾಂದಿ ಹಾಡಿದೆ ಎಂದರು.

1857 ರಿಂದ ತೊಡಗಿ 1947ರ ತನಕದ ಸ್ವಾತಂತ್ರ್ಯ ಹೋರಾಟ ಹಾಗೂ ಹೈದ್ರಾಬಾದ ಕರ್ನಾಟಕ ವಿಮೋಚನಾ ಸಂಗ್ರಾಮ ಇತಿಹಾಸ ನಮ್ಮ ಯುವ ಪೀಳಿಗೆಗೆ ತಿಳಿಸುವ ಹೊಣೆಗಾರಿಕೆ ನಮ್ಮ ಮೇಲಿದ್ದು ರಾಷ್ಟ್ರೀಯ ಪ್ರಸಾರ ಮಾಧ್ಯಮ ಆಕಾಶವಾಣಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಖೂಬಾ ಹೇಳಿದರು.

ಭಾರತೀಯರೆಲ್ಲರೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಶಕ್ತರಾಗಿ ಬಲಿಷ್ಠ ಭಾರತ ನಿರ್ಮಾಣ ಮಾಡಬೇಕಾಗಿದೆ. ಕೃಷಿ, ವಾಣಿಜ್ಯ ಕ್ಷೇತ್ರಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಿ ಭಾರತವನ್ನು ಆರ್ಥಿಕವಾಗಿ ಮುಂಚೂಣಿಯಲ್ಲಿ ತಂದು ನಿಲ್ಲಿಸಬೇಕಾಗಿದೆ. ವಿಶ್ವ ಮಟ್ಟದಲ್ಲಿ ‘ಕೊಡುವ’ ಭಾರತವಾಗಬೇಕೆ ಹೊರತು ‘ಬೇಡುವ’ ಭಾರತವಾಗಬಾರದು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಂಸ್ಕøತಿಕ ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗಳ್ಳಿ ಹೇಳಿದರು.

ಹೈದ್ರಾಬಾದ ಕರ್ನಾಟಕ ವಿಮೋಚನಾ ಸಂಗ್ರಾಮದ ಹೋರಾಟ ಮೈನವಿರೇಳಿಸುವಂಥದ್ದು ಹಾಗೂ ಮತಾಂಧರ ಆಡಳಿತದಿಂದ ಈ ಭಾಗದಲ್ಲಿ ಮಹಿಳೆಯರು ಸೇರಿದಂತೆ ನಾಗರಿಕರು ತೀವ್ರ ಸಂಕಷ್ಟ ಅನುಭವಿಸಿದರು. ಗೋರ್ಟಾದಂತಹ ಕರಾಳ ಘಟನೆ, ಸಗರ ಗ್ರಾಮದಲ್ಲಿ ಮಹಿಳಾ ದೌರ್ಜನ್ಯ, ರಂಗಂ ಪೇಟೆಯಲ್ಲಿ ಮನೆ ಲೂಟಿ ಕಣ್ಣಾರೆ ಕಂಡು ನೋವುಂಡ ಘಟನೆಗಳು ಸ್ವಾತಂತ್ರ್ಯದ ಕಿಚ್ಚು ಹಚ್ಚಿ ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿದೆ ಎಂದು ಹೋರಾಟಗಾರ, ರಾಜ್ಯ ಪ್ರಶಸ್ತಿ ವಿಜೇತರಾದ ಮಹಾದೇವಪ್ಪ ಕಡೇಚೂರ್ ತಮ್ಮ ಅನುಭವ ಹೇಳಿದರು ಹಾಗೂ ಅಚ್ಚಪ್ಪ ಗೌಡ, ಸರದಾರ ಶರಣಗೌಡ ಇನಾಂದಾರ್, ಬ್ಯಾರಿಸ್ಟಾರ್ ವೆಂಕಟಪ್ಪ ನಾಯಕ ಮುಂತಾದವರು ಹೋರಾಟಕ್ಕೆ ಮಾರ್ಗದರ್ಶನ ನೀಡಿದರೆಂದು ನೆನಪಿಸಿಕೊಂಡರು.

ಯುವ ಜನಾಂಗಕ್ಕೆ ಕಲ್ಯಾಣ ಕರ್ನಾಟಕದ ಇತಿಹಾಸ ತಿಳಿಸಲು ಕಲಬುರಗಿ ಆಕಾಶವಾಣಿ ಕೇಂದ್ರದ ಈ ಕಾರ್ಯಕ್ರಮ ಸೂಕ್ತವಾದುದು ಎಂದು ನಿಲಯದ ಮುಖ್ಯಸ್ಥರಾದ ಜಿ. ಗುರುಮೂರ್ತಿ ತಮ್ಮ ಅಧ್ಯÀಕ್ಷೀಯ ಭಾಷಣದಲ್ಲಿ ಹೇಳಿದರು. ಕಾರ್ಯಕ್ರಮ ಮುಖ್ಯಸ್ಥರಾದ ಅನಿಲ್‍ಕುಮಾರ್ ಎಚ್ ಎನ್ ಮಾತನಾಡಿ 55 ವರ್ಷಗಳ ಇತಿಹಾಸ ಹೊಂದಿರುವ ಕಲಬುರಗಿ ಆಕಾಶವಾಣಿ ಕೇಂದ್ರವು ಸಂಸ್ಕøತಿ, ಸಂಸ್ಕಾರ ಬಿತ್ತುವ ಜೊತೆಗೆ ಇಂತಹ ವಿಧಾಯಕ ಕಾರ್ಯಕ್ರಮಗಳ ಮೂಲಕÀ ಯುವ ಪೀಳಿಗೆಯಲ್ಲಿ ರಾಷ್ಟ್ರ ಪ್ರೇಮವನ್ನು ಬಿತ್ತುವ ಕಾರ್ಯ ಕೂಡಾ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರು ಇತ್ತಿಚಿಗೆ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟಗಾರ ಮಹಾದೇವಪ್ಪ ಕಡೇಚೂರ್ ಅವರಿಗೆ ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ಪ್ರಸಾರ ನಿರ್ವಾಹಕರಾದ ಸಂಗಮೇಶ ಧನ್ಯವಾದವಿತ್ತರು ಹಿರಿಯ ಉದ್ಘೋಷಕಿ ಶಾರದಾ ಜಂಬಲದಿನ್ನಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಡಾ ನಾಮದೇವ ಎಸ್ ಜಾಧವ, ಗಿರೀಶ ಗೌಡ ಇನಾಂದಾರ್, ವಿಜಯಲಕ್ಷ್ಮೀ ಖೇಣಿ, ಸಿದ್ದಾಜಿ ಪಾಟೀಲ ಮತ್ತಿತ್ತರು ಉಪಸ್ಥಿತರಿದ್ದರು. ‘ಸ್ವಾತಂತ್ರ್ಯದ ಅಮೃತ ಹೆಜ್ಜೆಗಳು’ ಸರಣಿಯಲ್ಲಿ ಪ್ರತಿ ತಿಂಗಳು 2 ಕಾರ್ಯಕ್ರಮಗಳು ನೇರಪ್ರಸಾರದಲ್ಲಿ ಬಿತ್ತರಗೊಳ್ಳಲಿದೆ.