
ಕಲಬುರಗಿ:ಮಾ.16: ಆಕಾಶವಾಣಿ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಜಂಟಿಯಾಗಿ ನೇರ ಪ್ರಸಾರದಲ್ಲಿ ಬಿತ್ತರ ಮಾಡಿದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ವಿಶೇಷ ಉಪನ್ಯಾಸ “ಸ್ವಾತಂತ್ರ್ಯದ ಅಮೃತ ಹೆಜ್ಜೆಗಳು” ಇದು ಕೃತಿ ರೂಪಕ್ಕೆ ಬಂದಿದ್ದು ಮಾರ್ಚ್ 18 ರಂದು ಬೆಳಿಗ್ಗೆ 10. 30 ಕ್ಕೆ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಅಮೃತ ಹೆಜ್ಜೆಗಳು ಕೃತಿಯನ್ನು ಆಕಾಶವಾಣಿ ಕೇಂದ್ರದ ಸಂಗೀತ ಸ್ಟುಡಿಯೋದಲ್ಲಿ ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಮಾರ್ಚ್ 18ರಂದು ಶನಿವಾರ ಬೆಳಿಗ್ಗೆ 10.30 ಗಂಟೆಯಿಂದ 12 ಗಂಟೆಯ ವರೆಗೆ ನೇರ ಪ್ರಸಾರದಲ್ಲಿ ಆಕಾಶವಾಣಿಯಲ್ಲಿ ಬಿತ್ತರಿಸಲಾಗುತ್ತಿದೆ.
ಗ್ರಂಥವನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಲೋಕಾರ್ಪಣೆಗೈಯಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಡಾ. ಬಸವರಾಜ ಪಾಟೀಲ್ ಸೇಡಂ ಅವರು ಭಾಗವಹಿಸಿ ಮಾತನಾಡಲಿದ್ದಾರೆ . ಡಾ. ವಾಸುದೇವ ಅಗ್ನಿಹೋತ್ರಿ ಸೇಡಂ ಗ್ರಂಥ ಪರಿಚಯ ಮಾಡಿಕೊಡಲಿದ್ದಾರೆ .ಅತಿಥಿಗಳಾಗಿ ಸಾಂಸ್ಕೃತಿಕ ಸಂಘದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಪಾಟೀಲ್, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಚ್.ಎನ್ ಭಾಗವಹಿಸಲಿದ್ದಾರೆಕಾರ್ಯಕ್ರಮ ಮುಖ್ಯಸ್ಥರಾದ ಪ್ರಕಾಶ್ ಮುಜುಂದಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಆಕಾಶವಾಣಿಯಲ್ಲಿ ಒಂದು ವರ್ಷಗಳಷ್ಟು ಕಾಲ ನಡೆದ ನೇರ ಪ್ರಸಾರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹೋರಾಟದ ಇತಿಹಾಸದ ಬಗ್ಗೆ ಅಪೂರ್ವ ವಿಷಯಗಳನ್ನು ಒಳಗೊಂಡ ಸರಣಿ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. 22 ಮಂದಿ ಇತಿಹಾಸ ತಜ್ಞರು ಮಂಡಿಸಿದ ಉಪನ್ಯಾಸ ಹಾಗೂ ನೇರ ಪ್ರಸಾರದ ದಿನ ಅಧ್ಯಕ್ಷತೆ ವಹಿಸಿದ ಸ್ವಾತಂತ್ರ್ಯ ಹೋರಾಟಗಾರರು ಹಿರಿಯ ನಾಗರಿಕರು ಚಿಂತಕರು ಮಾಡಿದ ಭಾಷಣಗಳ ಸುಮಾರ ಐನೂರು ಪುಟದ ಕೃತಿಯನ್ನು ಡಾ. ಸದಾನಂದ ಪೆರ್ಲ ಅವರು ಸಂಪಾದನೆ ಮಾಡಿ ಇದೀಗ ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಈ ಕೃತಿಯನ್ನು ಪ್ರಕಾಶನ ಮಾಡುತ್ತಿದ್ದು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾದ ಆಕರ ಗ್ರಂಥವಾಗಿದೆ. 22 ವಿಶೇಷ ಉಪನ್ಯಾಸಗಳು ಅಧ್ಯಕ್ಷರ ಭಾಷಣ, ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರ ಭಾಷಣ, ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಕಲ್ಬುರ್ಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹಾಗೂ ಸಮಾರೋಪದಲ್ಲಿ ಡಾ. ಬಸವರಾಜ ಪಾಟೀಲ್ ಸೇಡಂ ಅವರ ನುಡಿಗಳು ಒಳಗೊಂಡಂತೆ ಆಕರ್ಷಕ ಮುದ್ರಣದೊಂದಿಗೆ ಕೃತಿಯನ್ನು ಹೊರ ತರಲಾಗಿದೆ ಎಂದು ಕೃತಿಯ ಸಂಪಾದಕರಾದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಅವರು ತಿಳಿಸಿದ್ದಾರೆ.
ಆಹ್ವಾನಿತರ ಸಮ್ಮುಖದಲ್ಲಿ ಬಿಡುಗಡೆ :
'ಸ್ವಾತಂತ್ರ್ಯದ ಅಮೃತ ಹೆಜ್ಜೆಗಳು' ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಆಕಾಶವಾಣಿ ಕಲ್ಬುರ್ಗಿಯು ಮಾರ್ಚ್ 18ರಂದು ಶನಿವಾರ ಬೆಳಿಗ್ಗೆ 10.30 ಗಂಟೆಯಿಂದ 12 ಗಂಟೆಯ ವರೆಗೆ ನೇರ ಪ್ರಸಾರದಲ್ಲಿ ಬಿತ್ತರಿಸಲಿದೆ. ಆಹ್ವಾನಿತ ಗಣ್ಯರು ಇದರಲ್ಲಿ ಭಾಗವಹಿಸಲಿದ್ದಾರೆ.