ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ ಕವಿ ಪಿ ಧೂಲಾಸಾಬ :ಡಾ.ಚನ್ನಪ್ಪ ಕಟ್ಟಿ

ಇಂಡಿ:ಸೆ.26: ಹಲಸಂಗಿ ಎಂಬ ಕುಗ್ರಾಮದಲ್ಲಿದ್ದು ಆದಿಲ್ ಶಾಹಿ ಮನೆತನದಿಂದ ಪಟೇಲ್ ಹೆಸರು ಪಡೆದು,ಮಧುರಚನ್ನರ ಓದನ್ನು ಕೇಳಿಸಿಕೊಂಡು ಮನನ ಮಾಡುತ್ತಾ ಬೆಳೆದ ಧೂಲಾಸಾಬ ಅವರು ಜಿಲ್ಲೆ-ನಾಡು ಕಂಡ ಅಪರೂಪದ ಲಾವಣಿಗಳ ಸಂಗ್ರಹಣೆಕಾರ ಆಗಿದ್ದರು ಎಂದು ನಾಡಿನ ಖ್ಯಾತ ಸಾಹಿತಿಗಳಾದ ಡಾ.ಚನ್ನಪ್ಪ ಕಟ್ಟಿ ಅಭಿಪ್ರಾಯಪಟ್ಟರು.
ಅವರು ಇಂದು ಇಂಡಿ ಪಟ್ಟಣದ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ-ಸಾಂಸ್ಕøತಿಕ ಜಗಲಿ ವತಿಯಿಂದ ಜರುಗಿದ “ಪಿ ದೂಲಾಸಾಬ”ಕುರಿತು ಆನ್ ಲೈನ್ ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದರು.
ಕೈಬರಹದಲ್ಲಿ ಬರೆದು ಪತ್ರಿಕೆಗಳನ್ನು ಹಂಚಿ, ಲೇಖನಗಳನ್ನು ಬರೆದು,ಹಲಸಂಗಿ ಗೆಳೆಯರ ಬಳಗದ ಸಾಹಿತ್ಯದ ಕಂಪನ್ನು ಹೊರಸೂಸಿದರು. ಸ್ವಾತಂತ್ರ್ಯಕ್ಕಾಗಿ ಫಣ ತೊಟ್ಟು ಸ್ವಾತಂತ್ರ್ಯ ಸಿಗುವವರೆಗೂ ಮದುವೆ ಆಗುವದಿಲ್ಲ ಹಾಗೂ ತಲೆಯ ಜಡೆ ಕಟ್ಟುವದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಧೂಲಾಸಾಬ ಹಾಗೆಯೇ ಬಾಳಿದ ಮಹಾನ ನೇತಾರ ಎಂದು ಹೇಳಿ,ಬೇಂದ್ರೆ,
ಕಾರಂತರೊಂದಿಗೆ ನಿಕಟ ಸಂಪರ್ಕ ಹೊಂದಿ,
ಹಲಸಂಗಿಯಲ್ಲಿ ಶಾರದಾ ವಾಚನಾಲಯ ಆರಂಭಿಸಿದ ಹೆಗ್ಗಳಿಕೆ ಇವರದು.ಜೀವನ ಪೂರ್ತಿ ಸಂಚಾರಿಯಾಗಿ ಒಂದು ವರ್ಷದಲ್ಲಿ ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಓದಿ,ತನ್ನ ಜ್ಞಾನ ಪಾಂಡಿತ್ಯ ಹೆಚ್ಚಿಸಿಕೊಂಡ ಧೂಲಾಸಾಬ ಇಂದಿಗೂ ಉತ್ಸಾಹದ ಚಿಲುಮೆಯಾಗಿ ಶೃಂಗಾರದ ಲಾವಣಿಗಳನ್ನು ಬರೆದು ಹೆಸರುವಾಸಿಯಾದವರು ಹಾಗೂ ಮುತ್ತು ರತ್ನದಂತಹ ಎರಡು ಕೃತಿಗಳನ್ನು ಈ ಸಾರಸ್ವತ ಲೋಕಕ್ಕೆ ಕೊಟ್ಟರು ಎಂದು ಹೇಳಿದರು.
ಖ್ಯಾತ ಸಾಹಿತಿಗಳಾದ ಡಾ.ರಾಗಂ ಅವರು ಅಧ್ಯಕ್ಷತೆ ವಹಿಸಿ,ಗಾಂಧೀಜಿಯವರಿಂದ ಪ್ರೇರಿತರಾಗಿ,ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ,ಸಂಘಟನೆ ತರಬೇತಿ ಮೂಲಕ ಬೆಳೆದವರು.ಸಾಹಿತ್ಯ-ಸ್ವಾತಂತ್ರ್ಯ ರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಕನ್ನಡದ ಪತ್ರಿಕೆಗಳಾದ ಕನ್ನಡಿಗ,ಜಯ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ದೂಲಾಸಾಬ ಅವರದು.ನಿಸರ್ಗದ ಸಂಗತಿಗಳನ್ನು ಕವನಗಳಲ್ಲಿ ಮೂಡಿಸಿ,ಓದು ಬರಹದ ಮೂಲಕ ಸಾಹಿತ್ಯ ಶ್ರೀಮಂತಗೊಳಿಸಿದ ಅವರ ಸೇವೆ ಅನುಪಮವಾದುದು
ಎಂದು ಹೇಳಿದರು.
ನಾಡಿನ ಜಾನಪದ ವಿದ್ವಾಂಸರಾದ ಶ್ರೀರಾಮ ಇಟ್ಟಣ್ಣವರ, ಯಲ್ಲಪ್ಪ ಯಾಕೊಳ್ಳಿ,ಡಾ.ಎಂ.ಎಸ್, ಮದಭಾವಿ, ಸಂಶೋಧಕರಾದ ಡಿ ಎನ್ ಅಕ್ಕಿ,ಡಾ.ಎಸ್ ಕೆ ಕೊಪ್ಪ,ಎ ಎಸ್ ಗಾಣಿಗೇರ,ಬಸವರಾಜ ಕಿರಣಗಿ,
ಗೀತಯೋಗಿ,ಸಂತೋಷ ಬಂಡೆ,ಶ್ರೀಧರ ಹಿಪ್ಪರಗಿ,
ಮೊಯಿನ್ ಮುಲ್ಲಾ,ಈರಣ್ಣ ಕಂಬಾರ,
ಸುಜಾತಾ ಬೀಳಗಿ,ಪುಂಡಲೀಕ ಸಣ್ಣಾರ,ರಾಮಚಂದ್ರ ಚೋಪಡೆ ಸೇರಿದಂತೆ ಸಾಹಿತಿಗಳು,ಸಾಹಿತ್ಯಾಸಕ್ತರು
ಭಾಗವಹಿಸಿದ್ದರು.
ವೈ ಜಿ ಬಿರಾದಾರ ಸ್ವಾಗತಿಸಿದರು, ಸಿ ಎಂ ಬಂಡಗರ ಕಾರ್ಯಕ್ರಮ ನಿರ್ವಹಣೆ ಮಾಡಿ ವಂದಿಸಿದರು.