
ಭಾಲ್ಕಿ:ಆ.9: ಸ್ವಾತಂತ್ರೋತ್ಸವ ನಮ್ಮ ರಾಷ್ಟ್ರದ ಬಹುದೊಡ್ಡ ಹಬ್ಬವಾಗಿದೆ ಎಂದು ಬಸವಕಲ್ಯಾಣ ಉಪ ವಿಭಾಗದ ನೂತನ ಸಹಾಯಕ ಆಯುಕ್ತ ಪ್ರಕಾಶ ಕುದರಿ ಹೇಳಿದರು.
ಪಟ್ಟಣದ ತಹಸೀಲ ಕಚೇರಿಯಲ್ಲಿ ಮಂಗಳವಾರ ಕರೆದ ಅಗಷ್ಟ 15 ರಂದು ನಡೆಯಲಿರುವ ಸ್ವಾತಂತ್ರ ದಿನಾಚರಣೆಯ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸ್ವಾತಂತ್ರೋತ್ಸವವು ನಮ್ಮ ರಾಷ್ಟ್ರದ ಅತಿದೊಡ್ಡ ಹಬ್ಬವಾಗಿದೆ. ಸ್ವಾತಂತ್ರವಿಲ್ಲದಿದ್ದರೆ ನಾವು ನಮ್ಮ ನಾಡಿನಲ್ಲಿ ಯಾವುದೆ ಹಬ್ಬ ಆಚರಿಸಲು ಆಗುತ್ತಿರಲಿಲ್ಲ. ಹೀಗಾಗಿ ಪ್ರತಿ ವರ್ಷ ಅಗಷ್ಟ 15 ರಂದು ಸ್ವಾತಂತ್ರ ದಿನಾಚರಣೆಯನ್ನು ಉತ್ಸಾಹದಿಂದ ಆಚರಿಸಬೇಕು. ಸ್ವಾತಂತ್ರಯೋಧರ ಸ್ಮರಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಸರ್ಕಾರದ ಕೆಲಸ ದೇವರ ಕೆಲಸ ಎಂದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಸರ್ಕಾರಿ ಕರ್ಮಚಾರಿಗಳು ಸಾರ್ವಜನಿಕರಿಗೆ ತೊಂದರೆ ಕೊಡದಂತೆ ಕಾರ್ಯನಿರ್ವಹಿಸಬೇಕು. ಸರ್ಕಾರದ ಎಲ್ಲಾ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸವಾಗಬೇಕು. ಕಚೇರಿಗಳಿಗೆ ಹಳ್ಳಿಗಳಿಂದ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ನಮ್ಮಲ್ಲಿರುವ ಎಲ್ಲಾ ಸಮಸ್ಯಗಳೂ ಸಮರ್ಪಕವಾಗಿ ನಿರ್ವಹಿಸುವ ಕಾರ್ಯವಾಗಬೇಕು. ಕಂದಾಯ ಇಲಾಖೆ ಎಲ್ಲಾ ಇಲಾಖೆಗಳ ಮಾತೃ ಇಲಾಖೆಯಾಗಿದೆ. ಕಚೇರಿಯ ಸ್ವಚ್ಛತೆಯ ಬಗ್ಗೆ ಆದ್ಯತೆ ನೀಡಬೇಕು. ಕಚೇರಿ ಕೆಲಸದಲ್ಲಿ ನಿಷ್ಕಾಳಜಿ ತೋರಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರು ಸಮಯಪಾಲನೆಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದು ಹೇಳಿದರು.
ಕ್ರಾಂತವೀರ ಸಂಗೊಳ್ಳಿರಾಯಣ್ಣ ಸಮಾಜದ ಮುಖಂಡ ಕೆ.ಡಿ.ಗಣೇಶ, ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ಡಾ| ಕಾಶಿನಾಥ ಚಲವಾ, ಸಂತೋಷ ಬಿಜಿಪಾಟೀಲ, ಕನ್ನಡ ಪರ ಸಂಘಟನೆಯ ಸಂಗಮೇಶ ಗುಮ್ಮೆ, ಸುಖದೇವ ನಿಟ್ಟೂರೆ ಸ್ವಾತಂತ್ರ ದಿನಾಚರಣೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ ಇಲಾಖೆಯ ವಿವಿಧ ಸುತ್ತೋಲೆಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯಗುರು ಶಿವಕುಮಾರ ಮೇತ್ರೆ, ಸಮಾಜಕಲ್ಯಾಣ ಅಧಿಕಾರಿ ಸತೀಶಕುಮಾರ ಸಂಗಣ್ಣ, ಆರ್‍ಎಫ್‍ಓ ವಿರೇಶ, ಅಶೋಕ ಬಾವುಗೆ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿದೇರ್ಶಕ ಮಲ್ಲಿನಾಥ ಸಜ್ಜನ, ಇಸಿಓ ಜಯರಾಮ ಬಿರಾದಾರ, ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕಿ ವಿಜಯಮಾಲಾ ವಗ್ಗೆ, ಸಂಜು ನಾವದಗಿ, ಸಂತೋಷ ನಾಟೆಕರ, ಸಂಜಿವಕುಮಾರ ಗುಂಜರಗೆ, ಶಿವಶರಣಪ್ಪ ಛತ್ರೆ ಸೇರಿದಂತೆ ಮುಂತಾದ ಗಣ್ಯರು ಹಾಜರಿದ್ದರು.
ಕೋಟ್: ಹಿಂದಿನ ಸರ್ಕಾರದಲ್ಲಿ ಎಲ್ಲಾ ಇಲಾಖೆ ಮತ್ತು ಶಾಲಾ ಕಾಲೇಜುಗಳ ಕಚೇರಿಯಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಅಳವಡಿಸುವಬಗ್ಗೆ ಆದೇಶವಾಗಿದೆ. ಅದರಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಾತಿ ಪ್ರಮಾಣಪತ್ರ ನೀಡುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ತಳೆಯುತ್ತಿದ್ದಾರೆ. ಸಂಬಂಧಪಟ್ಟವರಿಗೆ ತಕ್ಷಣವೇ ಜಾತಿ ಪ್ರಮಾಣಪತ್ರ ನೀಡುವ ಕಾರ್ಯವಾಗಬೇಕು.
ಕೆ.ಡಿ.ಗಣೇಶ, ಜಿಲ್ಲಾಧ್ಯಕ್ಷರು, ರಾಯಣ್ಣ ಯುವಪಡೆ ಬೀದರ.
ಕೋಟ್: ಸಾರ್ವಜನಿಕ ಸಂಪರ್ಕಗಳ ಕಚೇರಿಗಳಲ್ಲಿ ಶೌಚಾಲಯದ ಕೊರತೆ ಎದ್ದು ಕಾಣುತ್ತಿದೆ. ನನ್ನ ಅವಧಿಯಲ್ಲಿ ಈ ಸಮಸ್ಯೆ ಸರಿಪಡಿಸುವ ಕಾರ್ಯ ಮಾಡುವೆ.
ಪ್ರಕಾಶ ಕುದರಿ, ಸಹಾಯಕ ಆಯುಕ್ತರು, ಬಸವಕಲ್ಯಾಣ.
ಕರವೇ ಗಣೇಶ ಪಾಟೀಲ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು. ಬಿಇಓ ಮಜಹರ ಹುಸೇನ ವಂದಿಸಿದರು.