ಸ್ವಸ್ಥ ಸಮಾಜ ನಿರ್ಮಾಣಕ್ಕೆ ಇಳಕಲ್ ಮಹಾಂತ ಶ್ರೀಗಳ ಕೊಡುಗೆ ಅಪಾರ

ಕಲಬುರಗಿ,ಆ.1: ಮದ್ಯಪಾನ, ಧೂಮಪಾನ, ಗುಟಕಾ ಸೇವನೆಯಂತಹ ಮುಂತಾದ ಕೆಟ್ಟ ಚಟಗಳಿಗೆ ದಾಸರಾಗಿ, ಸ್ವಂತ ತಾವೂ ಹಾಳಾಗುವದರ ಜೊತೆಗೆ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದ ಅಸಂಖ್ಯಾತ ಯುವ ಜನತೆಯ ಚಟವನ್ನು ಬಿಡಿಸಿ, ಅವರ ಬಾಳನ್ನು ಸುಂದರವಾಗಿಸುವ ಜೊತೆಗೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಇಡೀ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ ಇಳಕಲ್‍ನ ಪೂಜ್ಯ ಡಾ.ಮಹಾಂತ ಶಿವಯೋಗಿಗಳು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಮಹಾದೇವ ನಗರದಲ್ಲಿರುವ ‘ಶಿವಾ ವಿದ್ಯಾಮಂದಿರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಇಳಕಲ್ ಡಾ.ಮಹಾಂತ ಶಿವಯೋಗಿಗಳ ಜನ್ಮದಿನವಾದ ವ್ಯಸನಮುಕ್ತ ದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಶ್ರೀಗಳು ಬಸವ ತತ್ವವನ್ನು ಎಲ್ಲೆಡೆ ಪ್ರಸರಿಸಲು ಸಾಕಷ್ಟು ಶ್ರಮಿಸಿದ್ದಾರೆ. ಅತ್ಯಂತ ಸರಳ, ಸಜ್ಜನಿಕೆಯ ಮೂರ್ತಿಯಾಗಿದ್ದ ಅವರು, ಒಬ್ಬ ಆದರ್ಶ ಗುರುಗಳೆಂದರೆ ಹೇಗೆ ಇರಬೇಕೆಂದು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಅವರ ಜನ್ಮದಿನವನ್ನು ಕರ್ನಾಟಕ ಸರ್ಕಾರ ‘ವ್ಯಸನಮುಕ್ತ ದಿನಾಚರಣೆ’ಯೆಂದು ಘೋಷಿಸಿರುವುದು ಅವರಿಗೆ ನೀಡಿರುವ ಪೂಜ್ಯನೀಯ ಗೌರವವಾಗಿದೆ ಎಂದರು.
ಪ್ರಮುಖರಾದ ಚನ್ನಬಸಪ್ಪ ಗಾರಂಪಳ್ಳಿ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಸಂಗೀತಾ ಸಿ.ಗಾರಂಪಳ್ಳಿ, ಸಿದ್ದರಾಮ ತಳವಾರ, ಸೋಮೇಶ ಡಿಗ್ಗಿ, ಬಸವರಾಜ ಮುನ್ನಳ್ಳಿ ಸೇರಿದಂತೆ ಇನ್ನಿತರರು ಇದ್ದರು.