ಸ್ವಸ್ಥ ಭಾರತದ ನಿರ್ಮಾಣಕ್ಕೆ ಆರೋಗ್ಯ ಅರಿವು ಅಗತ್ಯ: ಶಿವಕುಮಾರ್

ರಾಣೆಬೆನ್ನೂರು, ಆ. 28 ಮನುಷ್ಯ ಆರೋಗ್ಯವಾಗಿದ್ದರೆ ಸುತ್ತಲ ಪರಿಸರ ಆರೋಗ್ಯವಾಗಿರುತ್ತದೆ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕರು ಆರೋಗ್ಯ ಮತ್ತು ಅರಿವು ಹೊಂದಬೇಕಾದ ಅಗತ್ಯವಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ ಹೇಳಿದರು.
ಅವರು ಇಲ್ಲಿನ ಮಾರುತಿ ನಗರದ ಶಕುಂತಲಾ ಆಸ್ಪತ್ರೆ ಸಭಾಭವನದಲ್ಲಿ ಬಿಜೆಪಿ ಕರ್ನಾಟಕ ಆರೋಗ್ಯ ಭಾರತಿ ಘಟಕ ಮತ್ತು ಬಿಜೆಪಿ ಆಯೋಜಿಸಿದ್ದ ಉಚಿತ ಮೂಳೆ ಸಾಂದ್ರತೆ ಮತ್ತು ಸಕ್ಕರೆ ಕಾಯಿಲೆ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಸ್ವಚ್ಛ ಮತ್ತು ಆತ್ಮ ನಿರ್ಭರ ಭಾರತ ಯೋಜನೆಯಲ್ಲಿ ದೇಶದಾದ್ಯಂತ ಆರೋಗ್ಯ ಭಾರತಿ ಧ್ಯೆಯ ವಾಕ್ಯದಲ್ಲಿ ಶಿಬಿರಗಳನ್ನು ಆಯೋಜಿಸುವುದರ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮುಂದಾಗಿದೆ ಎಂದರು.
ಆರೋಗ್ಯ ಭಾರತಿ ಘಟಕದ ಅಧ್ಯಕ್ಷ, ಡಾ. ಶಿವಪ್ರಕಾಶ್ ತಂಡಿ ಅವರು ಮಾತನಾಡಿ, ಸಮಾಜದಲ್ಲಿ ಇಂದು ಆರೋಗ್ಯ ಸೇವೆ ಪಡೆಯುವುದು ಅಷ್ಟು ಸುಲಭದ ಮಾತಲ್ಲ, ಕೇಂದ್ರದ ಯೋಜನೆಯಲ್ಲಿ ಯಾವುದೇ ನಯಾ ಪೈಸೆ ಖರ್ಚಿಲ್ಲದೆ ಎಲ್ಲವೂ ಉಚಿತವಾಗಿ ಆರೋಗ್ಯ ಸೇವೆ ದೊರಕುತ್ತದೆ. ಆರೋಗ್ಯ ಹದಗೆಡುವ ಮುನ್ನ ತಪಾಸಣೆಗೋಳಪಡಬೇಕು, ಇದರಿಂದ ಕಾಯಿಲೆ ಯಾವ ಹಂತದಲ್ಲಿದೆ ಎನ್ನುವುದು ತಿಳಿಯಬಹುದು. ಸಾರ್ವಜನಿಕರು ಪ್ರತಿ ತಿಂಗಳು ನಡೆಯುವ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದು ಕೋರಿದರು.
ಸಿರ್ಸಿ ವಿಭಾಗದ ಸಹ ಸಂಯೋಜಕ, ನಾಗೇಶ್ ಅವರು, ಮಾತನಾಡಿ ಕಾಯಿಲೆಗಳು ಹೇಳಿ ಕೇಳಿ ಬರುವುದಿಲ್ಲ, ಅವು ನಮ್ಮ ನಿಯಂತ್ರಣದಲ್ಲಿಲ್ಲ ಕಾರಣ ಇಂದಿನ ದಿನನಿತ್ಯ ಬಳಕೆಯ ಆಹಾರಕ್ರಮ ಮತ್ತು ಬದಲಾದ ಜೀವನ ಶೈಲಿ. ಆರೋಗ್ಯ ಭಾರತಿ ಎಲ್ಲರಿಗೂ ಆರೋಗ್ಯ ವದಗಿಸುವ ಒಂದು ಬಹುದೊಡ್ಡ ಯೋಜನೆಯಾಗಿದೆ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ದೀಪಕ್ ಹರಪನಹಳ್ಳಿ, ಡಾ.ಜ್ಯೋತಿ ತಂಡಿ, ಉಪಾಧ್ಯಕ್ಷ ಶ್ರೀಕಾಂತ್ ಗೋಂದಕರ, ಸದಸ್ಯ ಸಂದೀಪ್ ಕುರ್ಡೇಕರ್ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.