ಸ್ವಸ್ಥ ಜೀವನಕ್ಕೆ ಶರಣರ ವಚನಗಳೇ ದಾರಿದೀಪ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.29:- ಸ್ವಸ್ಥ ಮತ್ತು ಸಾರ್ಥಕ ದಾಂಪತ್ಯ ಜೀವನಕ್ಕೆ ಶರಣರ ವಚನಗಳೇ ದಾರಿದೀಪ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
ರಾಮಕೃಷ್ಣನಗರ ಶ್ರೀ ಬಸವೇಶ್ವರ ಸೇವಾ ಸಮಿತಿ ರಾಮಕೃಷ್ಣನಗರದ ಕೆ.ಬ್ಲಾಕ್‍ನಲ್ಲಿರುವ ಗಣಪತಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ 21ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಶರಣರ ದೃಷ್ಟಿಯಲ್ಲಿ ದಾಂಪತ್ಯ ಜೀವನ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ವಿವಾಹವೆಂಬುದು ಎರಡು ದೇಹಗಳ ಸಂಬಂಧವಲ್ಲ. ಎರಡು ಹೃದಯಗಳ ಸಮ್ಮಿಲನವೆಂದು ಭಾವಿಸಿ ಒಬ್ಬರನ್ನೊಬ್ಬರು ಅರಿತುಕೊಂಡು ಬಾಳಲು ಶರಣರು 12ನೇ ಶತಮಾನದಲ್ಲಿಯೇ ಸಾವಿರಾರು ವಚನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವುಗಳನ್ನು ಅರಿತು ಅದರಂತೆ ನಡೆದರೆ ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಸಂನ್ಯಾಸಕ್ಕಿಂತ ಸಂಸಾರ ಶ್ರೇಷ್ಠ ಎಂಬ ನಿಲುವನ್ನು ವಚನಕಾರರು ತಾಳಿದ್ದು, ಅದಕ್ಕೆ ಜೇಡರ ದಾಸಿಮಯ್ಯ-ದುಗ್ಗಳೆ, ಆಯ್ದಕ್ಕಿ ಮಾರಯ್ಯ-ಆಯ್ದಕ್ಕಿ ಲಕ್ಕಮ್ಮ, ಮೋಳಿಗೆ ಮಾರಯ್ಯ_ಮೋಳಿಗೆ ಮಹಾದೇವಿ ಮುಂತಾದ ಶರಣ ದಂಪತಿಗಳ ಜೀವನವೇ ನೈಜ ದೃಷ್ಟಾಂತವಾಗಿದೆ ಎಂದರು.
ಹನ್ನೆರಡನೇ ಶತಮಾನಕ್ಕೆ ಮೊದಲು ಸರ್ವೇ ಜನ ಸುಖಿನೋ ಭವಂತು ಎಂಬ ವಾಕ್ಯ ಪ್ರಚಲಿತದಲ್ಲಿತ್ತು. ಶರಣರು ಆ ಸುಭಾಷಿತಕ್ಕಿಂತ ಭಿನ್ನವಾಗಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಕುಲಜರೇ ಶರಣರು ಎಂದು ಹೇಳುವ ಮೂಲಕ ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಯನ್ನೂ ಗೌರವಿಸಬೇಕು ಎಂದು ವಚನಗಳ ಮೂಲಕ ಕರೆ ನೀಡಿದರು ಎಂದರು.
ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಂ.ಪ್ರದೀಪ್ ಕುಮಾರ್ ಮಾತನಾಡಿ, ಮೈಸೂರಿನಲ್ಲಿ ಮೊದಲ ಬಾರಿಗೆ ಬಯಲಿನಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಚರಿಸುತ್ತಿದ್ದು, ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳನ್ನು ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.
ಬಸವ ಬಳಗಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಮಾತನಾಡಿ, ಮೈಸೂರಿನಲ್ಲಿ ಪ್ರಥಮ ಬಾರಿಗೆ ಆನೆಯ ಮೇಲೆ ಅಂಬಾರಿ ಇಟ್ಟು ಅದರೊಳಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರ ಇಟ್ಟು ಅದ್ದೂರಿಯಾಗಿ ಮೆರವಣಿಗೆ ಮಾಡುವ ಯೋಜನೆ ಹಾಕಿಕೊಂಡಿದ್ದು, ಅನುಭವ ಮಂಟಪ, ಸುತ್ತೂರು ಮಠ, ದೇವನೂರು ಮಠ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿ ಮತ್ತು ಹಾನಗಲ್ ಕುಮಾರಸ್ವಾಮಿಗಳ ಬಗ್ಗೆ ತಿಳಿಸುವ ಸ್ತಬ್ಧಚಿತ್ರಗಳ ಮೆರವಣಿಗೆ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಸಮಿತಿ ಅಧ್ಯಕ್ಷ ಕೆ.ಗುರುಸ್ವಾಮಿ, ಕಾರ್ಯದರ್ಶಿ ಬಿ.ಶಿವರುದ್ರಪ್ಪ, ಕಾರ್ಯಕ್ರಮ ಪ್ರಾಯೋಜಕ ಬಿ. ಮಹದೇವಪ್ಪ ಮತ್ತು ಬಸವ ಬಳಗಗಳ ಒಕ್ಕೂಟದ ಖಜಾಂಚಿ ವೀರೇಶ್ ಉಪಸ್ಥಿತರಿದ್ದರು.