ಸ್ವಸಹಾಯ ಸಂಘ ಬಲವರ್ಧನೆ ಡಿಸಿ ಕರೆ

ಕೋಲಾರ,ಆ.೨೯-ಬ್ಯಾಂಕ್ ಗಳು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಸಾಲ ನೀಡಿ, ಅವರ ಬಲವರ್ಧನೆಗೆ ಕೈ ಜೋಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಹೇಳಿದರು.
ನಗರದ ಅಂತರಗಂಗೆ ರಸ್ತೆಯಲ್ಲಿ ನೂತನವಾಗಿ ಆರಂಭವಾಗಿರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಉದ್ಘಾಟನೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಾಲ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವ ಸಹಾಯ ಸಂಘಗಳ ಸದಸ್ಯರಿಗೆ ಹಣ ಉಳಿತಾಯದ ಕಲ್ಪನೆಯ ಜೊತೆಗೆ ಹಣಕಾಸು ಸಹಕಾರವನ್ನು ಬ್ಯಾಂಕ್ ಗಳು ನೀಡಿದರೆ ಸಂಘಗಳ ಸದಸ್ಯರು, ಗುಂಪು ಚಟುವಟಿಕೆ ಮತ್ತು ವೈಯಕ್ತಿಕವಾಗಿ ಸ್ವ ಉದ್ಯೋಗವನ್ನು ಆರಂಭಿಸಿ ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಎಂದರು.
ಅರ್ಹತೆ ಹೊಂದಿರುವ ಪ್ರತಿಯೊಬ್ಬರಿಗೂ ಸಾಲ ನೀಡುವ ಮೂಲಕ ಕೆನರಾ ಬ್ಯಾಂಕ್ ಎಲ್ಲರ ವಿಶ್ವಾಸಗಳಿಸ ಬೇಕು. ಕೃಷಿ, ತೋಟಗಾರಿಕೆ, ಶಿಕ್ಷಣ, ಪಶುಸಂಗೋಪನೆ, ಗೃಹ ಸೇರಿದಂತೆ ಆದ್ಯತಾ ವಲಯಕ್ಕೆ ಹೆಚ್ಚಿನ ಸಾಲ ನೀಡುವ ಮೂಲಕ ಅಶಕ್ತರಿಗೆ ಶಕ್ತಿ ತುಂಬಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದರು.
ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಪ್ರಧಾನ ವ್ಯವಸ್ಥಾಪಕ ಜಿ.ಗೋಪಿಕೃಷ್ಣ ಮಾತನಾಡಿ, ಕೆನರಾ ಬ್ಯಾಂಕ್ ಸದಾ ಜನ ಸಾಮಾನ್ಯರ ಅಭಿವೃದ್ದಿಯ ಕಡೆ ಗಮನ ಕೇಂದ್ರಿಕರಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಸ್ವಸಹಾಯ ಸಂಘಕ್ಕೆ ಸಾಲ, ವಿದ್ಯಾಭ್ಯಾಸ ಸಾಲ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಗೃಹ, ವಾಹನ ಸೇರಿದಂತೆ ಇತರ ವಲಯಗಳಿಗೆ ಸಂಬಂಧಪಟ್ಟಂತೆ ಈ ಸಾಲ ಮೇಳದಲ್ಲಿ ೨೫ ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ೫ ರಿಂದ ೧೦ ನೇ ತರಗತಿಯ ೯೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗಿದೆ ಎಂದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ಎಂ.ಅಶೋಕ್ ಕುಮಾರ್ ಮಾತನಾಡಿ, ಬ್ಯಾಂಕ್ ಗಳಿಂದ ಸಾಲ ಪಡೆದವರು, ಅದನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ವಿಶ್ವಾಸವನ್ನು ಉಳಿಸಿಕೊಳ್ಳಬೇಕೆಂದು ತಿಳಿಸಿದರು.
ಕೋಲಾರ ನಗರದಲ್ಲಿ ಕೆನರಾ ಬ್ಯಾಂಕ್ ನ ನೂತನ ಪ್ರಾದೇಶಿಕ ಕಚೇರಿ ಪ್ರಾರಂಭವಾಗಿರುವುದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬ್ಯಾಂಕಿನ ಗ್ರಾಹಕರು ಮತ್ತು ಜನಸಾಮಾನ್ಯರಿಗೆ ಸಾಕಷ್ಟು ರೀತಿ ಅನುಕೂಲವಾಗಲಿದೆ ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಧೀರ್ ಎಸ್, ಜಿಲ್ಲೆಯ ಕೆನರಾ ಬ್ಯಾಂಕಿನ ವಿವಿಧ ಶಾಖೆಗಳ ವ್ಯವಸ್ಥಾಪಕರು, ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.