ಸ್ವಯಂ ಸೋಂಕು ಪರೀಕ್ಷೆಗೆ ಅಸ್ತು

ನವದೆಹಲಿ, ಮೇ ೨೦- ಕೋವಿಡ್ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಅಭಿವೃದ್ಧಿಪಡಿಸಿದ ಹೋಂ ಟೆಸ್ಟಿಂಗ್ ಕ್ಷಿಪ್ರ ಆಂಟಿಜೆನ್ ಪರೀಕ್ಷಾ ಕಿಟ್ ’ಕೋವಿಸೆಲ್ಫ್’ ಅನ್ನು ಬಳಸಲು ಐಸಿಎಂಆರ್ ಸೂಚಿಸಿದೆ.

ಕಿಟ್ ಬಳಸಿ, ಜನರು ತಮ್ಮದೇ ಆದ ಸ್ವ್ಯಾಬ್ ಅನ್ನು ಸಂಗ್ರಹಿಸಬಹುದು ಮತ್ತು ಕೇವಲ ೧೫ ನಿಮಿಷಗಳಲ್ಲಿ ಫಲಿತಾಂಶಗಳನ್ನು ಪಡೆಯಬಹುದು. ಇದನ್ನು ಕೊಳ್ಳುವ ವೆಚ್ಚವೂ ಕೂಡ ದುಬಾರಿಯಲ್ಲ. ಪ್ರತಿ ಕಿಟ್‌ಗೆ ೨೫೦ ರೂಪಾಯಿ ವೆಚ್ಚವಾಗಲಿದೆ.

ಆದಾಗ್ಯೂ, ಈ ಕಿಟ್ ಅನ್ನು ರೋಗಲಕ್ಷಣದ ಜನರು ಮತ್ತು ಲ್ಯಾಬ್ ಗಳಲ್ಲಿ ದೃಢೀಕರಣವಾದ ಪ್ರಕರಣಗಳ ನಿಕಟ ಸಂಪರ್ಕಿತರು ಮಾತ್ರ ಬಳಸಬೇಕು ಎಂದು ಆರೋಗ್ಯ ಸಂಶೋಧನಾ ಸಂಸ್ಥೆ ಹೇಳಿದೆ. ಅಲ್ಲದೆ, ಕಿಟ್‌ನ ವಿವೇಚನಾ ರಹಿತ ಬಳಕೆಗೆ ವಿರೋಧಿಸಿದೆ.

ಕಿಟ್ ಬಳಸುವುದಕ್ಕಾಗಿ, ಬಳಕೆದಾರರಿಗೆ ಮೊಬೈಲ್ ಅಪ್ಲಿಕೇಶನ್ ಅಗತ್ಯವಿರುತ್ತದೆ, ಇದು ಪರೀಕ್ಷಾ ಕಾರ್ಯವಿಧಾನದ ಸಮಗ್ರ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ರೋಗಿಗೆ ಪಾಸಿಟಿವ್ ಅಥವಾ ನೆಗೆಟಿವ್ ಪರೀಕ್ಷಾ ಫಲಿತಾಂಶವನ್ನು ನೀಡುತ್ತದೆ.

“ಪ್ರಸ್ತುತ, ಮಹಾರಾಷ್ಟ್ರದ ಪುಣೆಯ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ತಯಾರಿಸಿದ ಕೋವಿಸೆಲ್ಫ್ ಕೋವಿಡ್ ಒಟಿಸಿ ಆಂಟಿಜೆನ್ ಎಲ್‌ಎಫ್ ಸಾಧನವನ್ನು ಅನುಮೋದಿಸಲಾಗಿದೆ.” ಎಂದು ಐಸಿಎಂಆರ್ ಹೇಳಿದೆ.

ಪರೀಕ್ಷಾ ಕಾರ್ಯವಿಧಾನದ ನಂತರ ಪರೀಕ್ಷಾ ಪಟ್ಟಿಯ ಚಿತ್ರವನ್ನು ಕ್ಲಿಕ್ ಮಾಡಲು ಎಲ್ಲಾ ಬಳಕೆದಾರರಿಗೆ ಸೂಚಿಸಲಾಗಿದೆ ಮತ್ತು ಮೊಬೈಲ್ ಫೋನ್‌ನ ಅಪ್ಲಿಕೇಶನ್‌ನಲ್ಲಿನ ಡೇಟಾವನ್ನು ಸುರಕ್ಷಿತ ಸರ್ವರ್‌ನಲ್ಲಿ ಕೇಂದ್ರೀಯವಾಗಿ ಸೆರೆಹಿಡಿಯಲಾಗುತ್ತದೆ, ಅದು ಐಸಿಎಂಆರ್ ಕೋವಿಡ್ ಪರೀಕ್ಷಾ ಪೋರ್ಟಲ್‌ನೊಂದಿಗೆ ಸಂಪರ್ಕ ಹೊಂದಿದ್ದು, ಅಲ್ಲಿ ಮಾಹಿತಿ ಸಂಗ್ರಹಿಸಲಾಗುವುದು. ಆದಾಗ್ಯೂ, ರೋಗಿಯ ಗೌಪ್ಯತೆಯನ್ನು “ಸಂಪೂರ್ಣವಾಗಿ ಕಾಪಾಡಲಾಗುವುದು” ಎಂದು ಅದು ಭರವಸೆ ನೀಡಿದೆ.

ಅಲ್ಲದೆ, ಆರೋಗ್ಯ ಸಂಶೋಧನಾ ಸಂಸ್ಥೆಯ ಪ್ರಕಾರ, ಪಾಸಿಟಿವ್ ವರದಿ ಪಡೆಯುವ ಎಲ್ಲ ವ್ಯಕ್ತಿಗಳನ್ನು ನಿಜವಾದ ಧನಾತ್ಮಕ ಎಂದು ಪರಿಗಣಿಸಬಹುದು ಮತ್ತು ಪುನರಾವರ್ತಿತ ಪರೀಕ್ಷೆಯ ಅಗತ್ಯವಿಲ್ಲ.

ಆದರೆ, ನೆಗೆಟಿವ್ ವರದಿ ಪಡೆದ ರೋಗಲಕ್ಷಣ ಹೊಂದಿರುವವರು ಕ್ಷಣವೇ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಶಿಫಾರಸು ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ.

ಕೋವಿಡ್ ಪರೀಕ್ಷೆಯನ್ನು ಮನೆಯಲ್ಲೇ ಮಾಡಿಕೊಳ್ಳುವ ಹೋಂ ಪರೀಕ್ಷಾ ಕಿಟ್‌ಗೆ ಐಸಿಎಂಆರ್ ಅನುಮೋದನೆ ನೀಡಿರುವುದು ಸೋಂಕನ್ನು ಶೀಘ್ರ ಪತ್ತೆಹಚ್ಚಲು ನೆರವಾಗುತ್ತದೆ. ಜತೆಗೆ ಶೀಘ್ರ ಚಿಕಿತ್ಸೆಗೂ ಇದು ಸಹಾಯ ಮಾಡಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾರ್ ಟ್ವೀಟ್ ಮಾಡಿದ್ದಾರೆ.


ಮನೆಯಲ್ಲಿಯೇ ಪ್ರತಿಯೊಬ್ಬರು ಮೂಗಿನ ಸ್ವ್ಯಾಬ್‌ನ ಮೂಲಕ ಸ್ವಯಂ ಕೋವಿಡ್ ಪರೀಕ್ಷೆ ಮಾಡಿಕೊಳ್ಳುವ ಈ ಪರೀಕ್ಷಾ ಕಿಟ್‌ಗೆ ಐಸಿಎಂಆರ್ ಅನುಮೋದನೆ ನೀಡಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಪ್ರತಿಯೊಬ್ಬರು ಸ್ವಯಂ ರ್‍ಯಾಪಿಡ್ ಆಂಟಿಜನ್ ಟೆಸ್ಟ್ ಮೂಲಕ ಕೆಲವೇ ನಿಮಿಷಗಳಲ್ಲಿ ಕೊರೊನಾ ಸೋಂಕು ಇದೆಯೇ ಇಲ್ಲವೇ ಎಂಬುದನ್ನು ದೃಢಪಡಿಸಿಕೊಂಡಿ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.